ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರು

0
200

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರದಿಂದ ಪದವಿಪೂರ್ವ ಕಾಲೇಜುಗಳ ಭೌತಿಕ ತರಗತಿ ಹಾಜರಾಗಿದ್ದು, ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು.

ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆದವು. ಶೇ 50ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾಗಲು ಅವಕಾಶ ನೀಡಲಾಗಿದ್ದು, ಬ್ಯಾಚ್‌ವೈಸ್ ತರಗತಿ ನಡೆಸಲಾಯಿತು.

ಮಾರ್ಗಸೂಚಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಆಯಾ ಕಾಲೇಜಿನ ಪ್ರಾಂಶುಪಾಲರು ವಹಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿತ್ತು.

18 ವರ್ಷದೊಳಗಿನ ಮಕ್ಕಳಿಗೆ ಇನ್ನೂ ಲಸಿಕೆ ಕೊಡಿಸುವ ಪ್ರಕ್ರಿಯೆ ಆರಂಭಗೊಂಡಿಲ್ಲ. ಹಾಗಾಗಿ ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆಯ ಸಮಸ್ಯೆ ಉದ್ಭವಿಸಿಲ್ಲ. ಆದರೆ, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲು ಮತ್ತು ಕೋವಿಡ್ ತಗುಲಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಆರೈಕೆ ಮಾಡಲು ಕಾಲೇಜುಗಳಲ್ಲೇ ವಸತಿ ಸಹಿತ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ಗಳನ್ನು ಕಡ್ಡಾಯವಾಗಿ ತೆರೆಯಲು ಸೂಚಿಸಿದ್ದಾರೆ.

7 ದಿನಗಳ ಕ್ವಾರಂಟೈನ್ ಮುಗಿಸಿದ ವಿದ್ಯಾರ್ಥಿಗಳು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ, ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ತರಗತಿಗೆ ಹಾಜರಾಗಬಹುದಾಗಿದೆ. ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್‌ನಲ್ಲೇ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗವು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಶಿಕ್ಷಣ ಸಂಸ್ಥೆಗೆ ಹಾಜರಾಗಲು ಮತ್ತು ವಸತಿ ನಿಲಯದ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸುವಂತೆ ಡಿಸಿ ತಿಳಿಸಿದ್ದಾರೆ.

ಕೇರಳದಿಂದ ನಿತ್ಯ ಬರುವ ವಿದ್ಯಾರ್ಥಿಗಳು ಏಳು ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ತರಗತಿಗೆ ಹಾಜರಾಗಬೇಕಾಗಿದೆ. ಕೇರಳದಿಂದ ಪ್ರತಿ ದಿನ ಬರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೂಡ ಏಳು ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಶಿಕ್ಷಣ ಸಂಸ್ಥೆಗೆ ಹಾಜರಾಗಲು ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಸಂಭ್ರಮ

ಹಲವು ತಿಂಗಳುಗಳ ಬಳಿಕ ಕಾಲೇಜುಗಳಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಲ್ಲಿ ಸಂತಸ ಕಂಡು ಬಂತು. ಬೆಳಿಗ್ಗೆಯೇ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ, ಕಾಲೇಜುಗಳತ್ತ ಹೆಜ್ಜೆ ಹಾಕಿದರು.

ಕೆಲ ತಿಂಗಳಿಂದ ಆನ್‌ಲೈನ್‌ ಮೂಲಕವೇ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಬುಧವಾರ ಉಪನ್ಯಾಸಕರನ್ನು ಕಂಡು ತಮ್ಮ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಂಡರು.

ಇದುವರೆಗೆ ಆನ್‌ಲೈನ್‌ ತರಗತಿಗಳನ್ನು ಕೇಳುತ್ತಿದ್ದೆವು. ಇದೀಗ ಭೌತಿಕ ತರಗತಿಗೆ ಅವಕಾಶ ನೀಡಲಾಗಿದೆ. ಪಠ್ಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಉಪನ್ಯಾಸಕರಿಂದ ಕೇಳಿ ಪರಿಹಾರ ಪಡೆಯಲು ಅನುಕೂಲ ಆಗಲಿದೆ ಎಂದು ಗೋಕರ್ಣನಾಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂದೇಶ್‌ ಹೇಳಿದರು.