ಕೊರೊನಾ ಸೋಂಕು ವೇಗವಾಗಿ ಹರಡುವ ಭೀತಿ – ಪಶ್ಚಿಮ ಬಂಗಾಳದಲ್ಲಿ ಲಾಕ್‍ಡೌನ್ ಜಾರಿ

0
229
Policemen wearing face masks as a precaution against the coronavirus keep vigil along a barricaded road declared as containment zone in Kolkata, India, Thursday, July 9, 2020. India has overtaken Russia to become the third worst-affected nation by the coronavirus pandemic. (AP Photo/Bikas Das)

ಕೊಲ್ಕತ್ತಾ: ಶಾಲಾ-ಕಾಲೇಜು ಪುನಾರಂಭ, ವ್ಯಾಪಾರ ವಹಿವಾಟು ಚಟುವಟಿಕೆಗಳಿಗೆ ಮುಕ್ತ ಅವಕಾಶ ದೊರೆಯುತ್ತಿದ್ದಂತೆಯೇ ದೇಶದ ಹಲವೆಡೆ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗತೊಡಗಿದೆ. ಪರಿಣಾಮವಾಗಿ ಹಲವೆಡೆ ಲಾಕ್‍ಡೌನ್ ಘೋಷಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾಪುರ ಪುರಸಭೆ ಪ್ರದೇಶದಲ್ಲಿ ಮೂರು ದಿನಗಳ ಲಾಕ್‍ಡೌನ್ ವಿಧಿಸಲಾಗಿದೆ. ಸೋನಾಪುರ್‍ನಿಂದ ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾಗೆ ಕೇವಲ 20 ಕಿ.ಮೀ. ಅಂತರವಿದೆ. ಸೋಂಕು ವೇಗವಾಗಿ ಹರಡುವ ಭೀತಿಯಿಂದ ಲಾಕ್‍ಡೌನ್ ಕ್ರಮಕೈಗೊಳ್ಳಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಬಂಗಾಳ ಸರ್ಕಾರಕ್ಕೆ ಪತ್ರ ಬರೆದಿದ್ದು, ದುರ್ಗಾ ಪೂಜೆ ಹಬ್ಬಗಳ ನಂತರ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಹಬ್ಬದಿಂದಾಗಿ ಶೇ. 25ರಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ ಕೊಲ್ಕತ್ತಾದಲ್ಲೇ 248 ಹೊಸ ಪ್ರಕರಣಗಳು ದಾಖಲಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

“ಕೋವಿಡ್-19 ಲಸಿಕೆಯ ಎರಡೂ ಡೋಸ್ ಪಡೆದ ಹೆಚ್ಚಿನವರಲ್ಲೇ ಕೊರೊನಾ ಸೋಂಕು ದೃಢಪಟ್ಟಿದೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಸೋಂಕು ಹಾಗೂ ಸಾವು ಪ್ರಕರಣಗಳ ಕುರಿತು ಪರಿಶೀಲನೆ ನಡೆಸಬೇಕು. ಜೊತೆಗೆ ಕೋವಿಡ್‍ನಿಂದ ಸುರಕ್ಷಿತವಾಗಿ ಹಬ್ಬಗಳನ್ನು ಆಚರಿಸುವುದಕ್ಕೆ ಕ್ರಮಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಸೂಚನೆ ನೀಡಿದೆ.