ನನ್ನನ್ನು ಜೋಕರ್ ಎಂದು ಕರೆದಿದ್ದಕ್ಕೆ ಸಿಟ್ಟಿನ ಭರದಲ್ಲಿ ಆ ಶಬ್ಧ ಪ್ರಯೋಗಿಸಿ ಕೂಡಲೇ ಕ್ಷಮೆ ಕೇಳಿದೆ: ಕೆ ಎಸ್ ಈಶ್ವರಪ್ಪ

0
234

ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ಮಾಡಿ ವಿವಾದವೆದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ನನ್ನನ್ನು ಜೋಕರ್ ಎಂದು ಬಿ ಕೆ ಹರಿಪ್ರಸಾದ್ ಅವರು ಕರೆದಿದ್ದಕ್ಕೆ, ನರೇಂದ್ರ ಮೋದಿಯವರ ಹೆಸರನ್ನು ಸುಲಭ್ ಶೌಚಾಲಯಕ್ಕೆ ಬಳಸಬೇಕು ಎಂದಿದ್ದಕ್ಕೆ ಸಿಟ್ಟಿನ ಭರದಲ್ಲಿ ನಾನು ಆಕ್ಷೇಪ ಪದ ಬಳಕೆ ಮಾಡಿದ್ದೆ. ಕೂಡಲೇ ನನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿ ವಾಪಸ್ ತೆಗೆದುಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಂಸ್ಕೃತಿ, ಸಂಸ್ಕಾರ ತೋರಿಸುತ್ತದೆ ಎಂದಿದ್ದಾರೆ. ನನ್ನ ಮೇಲೆ ಯಾವುದೇ ಕೇಸುಗಳಿಲ್ಲ, ತುರ್ತು ಪರಿಸ್ಥಿತಿ ಸಂದರ್ಭ ಬಿಟ್ಟರೆ ಬೇರೆ ಯಾವ ಸಂದರ್ಭದಲ್ಲಿಯೂ ನಾನು ಜೈಲಿಗೆ ಹೋಗಿ ಬಂದಿಲ್ಲ, ನರೇಂದ್ರ ಮೋದಿ ಹೆಸರು ಸುಲಭ ಶೌಚಾಲಯಕ್ಕೆ ಹೆಸರಿಡಿ ಅಂತಾ ಹೇಳಿದ್ದು ಸರೀನಾ? ಜೋಕರ್ ಅಂದಿದ್ದಕ್ಕೆ ಸಿಟ್ಟು ಬಂತು. ಸುಲಭ ಶೌಚಾಲಯಕ್ಕೆ ಮೋದಿ ಹೆಸರಿಡಿ ಅಂದಿದ್ದು ಕೇಳಿ ರಕ್ತ ಕುದೀತು. ಸಿಟ್ಟಿನ ಭರದಲ್ಲಿ ಆ ಮಾತು ಮಾತನಾಡಿ ತಕ್ಷಣವೇ ಆ ಪದ ವಾಪಸ್ ಪಡೆದೆ ಎಂದು ಹೇಳಿದರು.

ನಾನು ಕ್ಷಮೆ ಕೇಳಿದೆ, ನೀವು ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕಲ್ವಾ. ಇಟಲಿ ಯೂನಿವರ್ಸಿಟಿ ಒಳ್ಳೆಯ ಬುದ್ಧಿ ಹೇಳಿಕೊಟ್ಟಿದೆ ಎಂದು ಹೇಳಿದ್ದೆ. ನಾನು ಆ ಪದ ಬಳಕೆ ಮಾಡಿದ್ದು ಹರಿಪ್ರಸಾದ್​ಗೆ, ಎಲ್ಲಾ ಕಾಂಗ್ರೆಸ್ ನಾಯಕರಿಗಲ್ಲ, ನನಗೂ ಹರಿಪ್ರಸಾದ್ಗೂ ವೈಯಕ್ತಿಕ ದ್ವೇಷ ಇಲ್ಲ ಅಂತ ಈಶ್ವರಪ್ಪ ಅಭಿಪ್ರಾಯಪಟ್ಟರು.

ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗೋ ಕಳ್ಳತನ ಮಾಡೋರನ್ನ ತಡೆದ್ರೆ ಕೊಲೆಗಳಾದವು. ಆಗ ಸಿದ್ದರಾಮಯ್ಯರನ್ನ ಕೇಳಿದಾಗ ಕೋಮುವಾದಿಗಳನ್ನು ಬಗ್ಗು ಬಡೀತಿವೆ ಅಂದ್ರು. ನಮ್ಮ ಶಕ್ತಿ ಬೆಳೆಸಬೇಕು ಅಂತಾ ಹೇಳಿದ್ದು ತಪ್ಪಲ್ಲ. ಫೇಸ್ ವಿತ್ ಸೇಮ್ ಸ್ಟಿಕ್, ಹೊಡೆದ್ರೆ ವಾಪಸ್ ಹೊಡೀರಿ ಅಂತಾ ನಮ್ಮ ಹಿರಿಯರು ಹೇಳಿದ್ದಾರೆ. ಅದಕ್ಕೆ ಜೋಕರ್ ಅಂತಾ ಹೆಸರಿಟ್ಟುಕೊಳ್ಳಿ ಅಂತಾ ಹರಿಪ್ರಸಾದ್ ಹೇಳಿದ್ರು. ನನಗೆ ಬಿಪಿ ಶುಗರ್ ಇಲ್ಲ ನನ್ನ ತಂಟೆಗೆ ಬಂದವ್ರಿಗೆ ಬಿಪಿ ಶುಗರ್ ಬರುತ್ತೆ ಅಂತ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಇನ್ನು ಸರ್ಕಾರದಲ್ಲಿ ಕೆಲವು ಸಚಿವರಿಗೆ ಖಾತೆ ಬಗ್ಗೆ ಅಸಮಾಧಾನ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ರಚನೆ ವೇಳೆ ಕೆಲವರಿಗೆ ಅಸಮಾಧಾನ ಸಹಜ. ಆನಂದ್ ಸಿಂಗ್ ಜತೆ ಸಿಎಂ, ಹಿರಿಯರು ಚರ್ಚಿಸುತ್ತಾರೆ. ಆನಂದ್ ಸಿಂಗ್ ರನ್ನು ಸಿಎಂ ಬೊಮ್ಮಾಯಿಯವರು ಸಮಾಧಾನಪಡಿಸುವ ವಿಶ್ವಾಸವಿದೆ ಎಂದರು.