ಪದ್ಮಶ್ರೀ ಹಾಜಬ್ಬರಿಗೆ!! ಪಾಠಗಳು ನಮಗೆ!!

0
205

✒️ ರಫೀಕ್ ಮಾಸ್ಟರ್

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಬಂದಿದೆ. ಅಭಿನಂದನೆಗಳು.

ಹಾಜಬ್ಬರಿಗೆ ಸಿಕ್ಕಿದ ಪದ್ಮಶ್ರೀ ನಮಗೆ ಕಲಿಸುವ ಪಾಠಗಳು

 1. ಸಮಾಜ ಸೇವೆ ಮಾಡಲು ಶ್ರೀಮಂತನೇ ಆಗಬೇಕಾಗಿಲ್ಲ. ಬಡವನೂ ಮಾಡಬಹುದು.

(ಹೃದಯದ ಶ್ರೀಮಂತಿಕೆಯೇ ಶ್ರೇಷ್ಠ ಶ್ರೀಮಂತಿಕೆ ಎಂಬ ಪ್ರವಾದಿವರ್ಯರ (ಸ) ವಚನವನ್ನು ಹಾಜಬ್ಬರು ನಿಜವಾಗಿಸಿದ್ದಾರೆ)

 1. ಸಮಾಜ ಸೇವೆ ಮಾಡಲು ವಿದ್ಯಾರ್ಹತೆಯ ಅಗತ್ಯವಿಲ್ಲ. ಅನಕ್ಷರಸ್ಥನೂ ಮಾಡಬಹುದು. (ಹಾಜಬ್ಬರಿಗೆ ಬರೆಯಲು ಗೊತ್ತಿರುವುದು ಎರಡೇ ಅಕ್ಷರ (PH) Panjimadi Hajabba
 2. ನಿಸ್ವಾರ್ಥ ಸೇವೆಗೆ ದುನಿಯಾದಲ್ಲೂ ಅಲ್ಲಾಹನ ಕಡೆಯಿಂದ ಅನುಗ್ರಹವಿದೆ. ಸ್ಥಾನಮಾನ, ಗೌರವ, ಪ್ರಶಸ್ತಿ, ಸನ್ಮಾನ ಸಿಗಲಿದೆ.

(ಎರಡಕ್ಷರ ಮಾತ್ರ ಗೊತ್ತಿರುವ ಹರೇಕಳ ಹಾಜಬ್ಬರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಕೈಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು)

 1. ಅಲ್ಲಾಹನು ತಾನು ಇಚ್ಛಿಸಿದವನಿಗೆ ಎಂತಹಾ ಮಹೋನ್ನತ ಸ್ಥಾನವನ್ನು ಕೊಡುತ್ತಾನೆ. (ಅಗರ್ಭ ಶ್ರೀಮಂತರಿಗೆ, ಸೆಲೆಬ್ರಿಟಿಗಳಿಗೆ, ಮಹಾ ಜ್ಞಾನಿಗಳಿಗೆ ಒಲಿಯದ ಪ್ರಶಸ್ತಿ ಹಾಜಬ್ಬರಿಗೆ ಸಿಕ್ಕಿದೆ)
 2. ಸಾಮಾನ್ಯ ಮನುಷ್ಯನಿಗೂ ಅಸಾಮಾನ್ಯ ಇಚ್ಛಾಶಕ್ತಿ ಇದ್ದಾಗ ಅದ್ಭುತವನ್ನು ಸೃಷ್ಟಿಸಬಹುದು.

(ಮಧ್ಯಾಹ್ನ ಊಟವೇ ಮಾಡದೆ ತನ್ನ ಹೊಟ್ಟೆಯನ್ನು ಕಟ್ಟಿ ಊರವರ ಮಕ್ಕಳಿಗೆ ಶಾಲೆ ಕಟ್ಟಿದ ಪುಣ್ಯಾತ್ಮ ಹಾಜಬ್ಬ)

 1. ಸಾಧನೆಯ ಪಯಣದಲ್ಲಿ ನಾವು ಏಕಾಂಗಿ. ಸಾಧನೆಯ ಸಂಭ್ರಮದಲ್ಲಿ ಎಲ್ಲರೂ ಭಾಗಿ.

(ಅಂದು ಶಾಲೆಗಾಗಿ ಕಚೇರಿಯಿಂದ ಕಚೇರಿ, ದಾನಿಗಳ ಮನೆಬಾಗಿಲಿಗೆ ಹೋಗುವಾಗ ಹಾಜಬ್ಬರು ಏಕಾಂಗಿ. ಇಂದು ಹಾಜಬ್ಬರ ಜೊತೆ ಇರುವುದು, ಸೆಲ್ಫಿ ತೆಗೆಯುವುದು ನಮಗೆ ಗೌರವ)

 1. ಪ್ರತಿಭೆ ಮತ್ತು ಸಾಧನೆಗೆ
  ಜಾತಿ,ಮತ,ಧರ್ಮ, ಭಾಷೆ, ಬಣ್ಣ ಮುಖ್ಯವಲ್ಲ. ಅದು ಪ್ರತಿಯೊಬ್ಬರ ಹಕ್ಕು.

(ಎರಡಕ್ಷರ ಮಾತ್ರ ಗೊತ್ತಿರುವ ಹಾಜಬ್ಬರ ಬಗ್ಗೆ 3 ಯುನಿವರ್ಸಿಟಿಯ ಪಠ್ಯಪುಸ್ತಕದಲ್ಲಿ ಪಾಠವಿದೆ.)

 1. ಪ್ರಾರಂಭದಲ್ಲಿ ಕೆಲವರು ಕಾಲೆಳೆಯುತ್ತಾರೆ. ಬಿದ್ದರೆ ಖುಷಿಪಡುತ್ತಾರೆ. ಮೈಕೊಡವಿ ಎದ್ದು ನಿಂತು ಸಾಧಿಸಿದರೆ ನಮ್ಮವರು ಎಂದು ಬೀಗುತ್ತಾರೆ.

(ಸಹಾಯಕ್ಕೆ ಕೇಳಲು ಹಾಜಬ್ಬರು ಮನೆಗೆ ಹೋದಾಗ ನಾಯಿ ಬಿಟ್ಟು ಓಡಿಸಿದವರು ಇದ್ದಾರೆ).

 1. ಸ್ವಂತಕ್ಕಾಗಿ ಬದುಕಿದವರು ಮಣ್ಣಲ್ಲಿ ಮಣ್ಣಾಗುತ್ತಾರೆ. ಪರರಿಗಾಗಿ ಬದುಕಿದವರು ಇತಿಹಾಸ ಸೇರುತ್ತಾರೆ. ಸ್ಫೂರ್ತಿಯ ಸೆಲೆಯಾಗುತ್ತಾರೆ.

(ಪ್ರಶಸ್ತಿ ಪ್ರದಾನದ ಬಗ್ಗೆ ಘನತೆವೆತ್ತ ರಾಷ್ಟ್ರಪತಿಗಳ ಟ್ವೀಟಿಗೆ ಅತಿ ಹೆಚ್ಚು ಲೈಕ್ ಪಡೆದವರು ಹರೇಕಳ ಹಾಜಬ್ಬರು)

 1. ಮನುಷ್ಯನಿಗೆ ಹೆಸರು, ಕೀರ್ತಿ, ಗೌರವ,ಸ್ಥಾನಮಾನ ಬಂದಾಗ ತನ್ನ ಮೂಲ ತನವನ್ನು ಉಳಿಸಿಕೊಂಡು ಬದಲಾಗದವನಿಗೆ ಎಲ್ಲರೂ ತಲೆ ಬಾಗುತ್ತಾರೆ.

(ಹರೇಕಳ ಹಾಜಬ್ಬ ಅಂದರೆ ಯಾರು ಎಂದು ಅರಿಯದ ಅಂದು ಅವರು ಹೇಗಿದ್ದಾರೋ,ಇಂದೂ ಹಾಗೆಯೇ ಇದ್ದಾರೆ. ಅವರ ವ್ಯಕ್ತಿತ್ವ, ಉಡುಪು, ಮಾತು, ವಿನಮ್ರತೆ, ಸರಳತೆ ಮತ್ತು ಜೀವನ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಇಲ್ಲ)

 1. ಸಾಧಕರು ಒಳಗಿನ ನೋವನ್ನು ನುಂಗಿ ಕೊಂಡು ಹೊರಗಡೆ ನಗುತ್ತಾರೆ. ಕೆಲವೊಮ್ಮೆ ನಕ್ಕಂತೆ ನಟಿಸುತ್ತಾರೆ.

(ಹಾಜಬ್ಬರಿಗೂ ತನ್ನ ಮಗಳಿಗೆ ಮದುವೆಯಾಗಿಲ್ಲ ಎಂಬ ಚಿಂತೆ ಒಳಗೊಳಗೆ ಸುಡುತ್ತಿದೆ).

 1. ಮನುಷ್ಯ ಸಾಧಕನಾದಾಗ ತನ್ನ ಸಾಧನೆಗೆ ಮೆಟ್ಟಿಲಾಗಿ ನಿಂತವರನ್ನು ಮರೆಯಬಾರದು. ಅವರ ನೆನಪು ಸದಾ ಇರಬೇಕು.

(ಹಾಜಬ್ಬರಿಗೆ ಅಂದಿನಿಂದ ಇಂದಿನವರೆಗೆ ಮಾಡಿದ ಸಹಾಯ ಎಷ್ಟೆ ಚಿಕ್ಕದಾಗಲಿ, ದೊಡ್ಡದಾಗಲಿ ಅವರನ್ನು ಸದಾ ನೆನಪಿಸುತ್ತಾರೆ)

 1. ಮಾಧ್ಯಮ ಮನಸ್ಸು ಮಾಡಿದರೆ ಒಬ್ಬ ಯೋಗ್ಯ ವ್ಯಕ್ತಿಯನ್ನು ಯಾವ ಹಂತಕ್ಕೆ ಬೇಕಾದರೂ ತಲುಪಿಸಬಹುದು.

(ಹಾಜಬ್ಬರಿಗೆ ಜಾಗತಿಕ ಮನ್ನಣೆಯ ಹಿಂದೆ ಮಾಧ್ಯಮದ ಪ್ರತಿನಿಧಿಗಳು ನೀಡಿದ ಸಹಕಾರ ಅಪೂರ್ವವಾದುದು)

 1. ಒಬ್ಬ ವ್ಯಕ್ತಿಯಲ್ಲಿ ಸರಳತೆ, ಪ್ರಾಮಾಣಿಕತೆ, ಸೌಹಾರ್ದತೆ, ಸೇವಾ ತತ್ಪರತೆ, ಬದ್ಧತೆ, ವಿನಮ್ರತೆ ಎಲ್ಲವೂ ಇದ್ದಾಗ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ.

(ಹಾಜಬ್ಬರನ್ನು ಜಾತಿ, ಮತ, ಧರ್ಮ ಭೇದವಿಲ್ಲದೆ ಸರ್ವಧರ್ಮೀಯರು ಇಷ್ಟಪಡುತ್ತಾರೆ ಮತ್ತು ಗೌರವಿಸುತ್ತಾರೆ).

ಕೊನೆಯದಾಗಿ
ಹಾಜಬ್ಬರಿಗೆ ಈ ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಬಂದಿದೆ. ಇನ್ನೂ ಅವರಿಗೆ ಸಾರ್ವಜನಿಕ ಸನ್ಮಾನಗಳು ಸಾಕು ಎಂದು ನನ್ನ ಅನಿಸಿಕೆ. ಅವರ ಮಗಳ ಮದುವೆಯ ಕಾರ್ಯಕ್ಕೆ ನಾವೆಲ್ಲ ಪ್ರಯತ್ನಿಸೋಣ. ಅದುವೇ ನಾವು ಅವರಿಗೆ ಮಾಡುವ ಸನ್ಮಾನ.

ನೂರಾರು ಹಾಜಬ್ಬರು ನಮ್ಮ ನಡುವೆ ಎಲೆಮರೆ ಕಾಯಿಯಂತೆ ಇದ್ದಾರೆ. ಅವರನ್ನು ಹುಡುಕಿ ಗುರುತಿಸುವ ಕೆಲಸವಾಗಬೇಕು. ಅಂಥವರನ್ನು ಸನ್ಮಾನಿಸಬೇಕು. ಬೆಳೆಸಬೇಕು. ಅರಳಿಸಬೇಕು.

Construction is better than felicitation

ಸನ್ಮಾನಕ್ಕಿಂತ ನಿರ್ಮಾಣ ಉತ್ತಮವಾದುದು.

ಹಾಜಬ್ಬರ ಬಲುದಿನದ ಪ್ರಾರ್ಥನೆ ನೆರವೇರಲಿ.
ನಮ್ಮ ನಡುವೆ ನೂರಾರು ಹಾಜಬ್ಬರು ಹುಟ್ಟಿ ಬರಲಿ.