‘ಪದ್ಮಶ್ರೀ’ಯ ಮೌಲ್ಯವೆಷ್ಟು..? ರೇಶನ್ ಅಂಗಡೀಲಿ ಕ್ಯೂ ನಿಂತಿದ್ದಾಗ ಹಾಜಬ್ಬರಿಗೆ ಆ ಕರೆ ಬಂದಿತ್ತು..!

0
272

✍🏻 ರಶೀದ್ ವಿಟ್ಲ.

ಆ ದಿನ ಬೆಳಗ್ಗೆ 11.40ರ ಸಮಯ. ಹರೇಕಳದ ಪಡಿತರ ಅಂಗಡಿಯ ಮುಂದೆ ಅನ್ನಭಾಗ್ಯದ ಅಕ್ಕಿಗಾಗಿ ಹಾಜಬ್ಬ ಕ್ಯೂ (ಸರದಿ ಸಾಲು) ನಿಂತಿದ್ದರು. ಅಕ್ಕಿ ನೀಡುವ ಮೊದಲು ಅವರ ಬೆರಳಿನ ‘ತಂಬ್’ ದಾಖಲಿಸಬೇಕಿತ್ತು. ಕ್ಯೂನಲ್ಲಿರುವಾಗಲೇ ಹಾಜಬ್ಬರ ಫೋನ್ ರಿಂಗಣಿಸಿತು. ಆ ಕಡೆಯಿಂದ ಹಿಂದಿಯಲ್ಲಿ, ಇಂಗ್ಲಿಷ್ ನಲ್ಲೆಲ್ಲಾ ಏನೇನೋ ಮಾತಾಡೋದು ಕೇಳಿಸಿತು. ಹಾಜಬ್ಬ ಉತ್ತರಿಸಲು ತಡವರಿಸಿದರು. ಹಾಜಬ್ಬರಿಗೆ ನಮ್ಮೂರ ಭಾಷೆ ಬಿಟ್ಟು ಬೇರ್ಯಾವುದೂ ಬರೋಲ್ಲ. ಫೋನನ್ನು ಹಿಂದಿ ಜ್ಞಾನವಿರುವ ಹತ್ತಿರದಲ್ಲೇ ಇದ್ದ ಆಟೋ ಡ್ರೈವರ್ ಬಳಿ ಹಾಜಬ್ಬ ಕೊಟ್ರು. ದೆಹಲಿಯ ಕೇಂದ್ರ ಗೃಹ ಸಚಿವಾಲಯದಿಂದ ಬಂದ ಕರೆಯಾಗಿತ್ತದು. ಹಾಜಬ್ಬರಿಗೆ ‘ಪದ್ಮಶ್ರೀ’ ಪ್ರಕಟಣೆಯಾದ ಸಂತಸದ ಸುದ್ದಿ ತಿಳಿಸಲು ದೆಹಲಿಯಿಂದ ಕರೆ ಮಾಡಿದ್ದರು. ಹಾಜಬ್ಬಗೆ ನಂಬಬೇಕೋ, ಬಿಡಬೇಕೋ ಗೊತ್ತಿಲ್ಲ. ಅಂತೂ ಆಶ್ಚರ್ಯಚಕಿತರಾದರು. ಅವರ ಮಾತಲ್ಲೇ ಹೇಳೋದಾದರೆ ‘ಒಂದು ನಯಾಪೈಸೆಯ ಬೆಲೆ ಇಲ್ಲದ ಮನುಷ್ಯನಿಗೆ ದೊರೆತ ಗೌರವ…’

ಹಾಜಬ್ಬ ಇನ್ನು ಪದ್ಮಶ್ರೀ ಹಾಜಬ್ಬ. ರಾಷ್ಟ್ರನತಿ ಅವರಿಂದ ಪದ್ಮಶ್ರೀ ಪಡೆದ ನಮ್ಮ ಜಿಲ್ಲೆಯ ಹೆಮ್ಮೆಯ ಅಕ್ಷರ ಸಂತ. ಹಾಜಬ್ಬ ಕಿತ್ತಳೆ ಮಾರಿ ಶಾಲೆ ಕಟ್ಟಿದ್ದಕ್ಕಿಂತಲೂ ಅವರ ಸರಳ ಸಜ್ಜನಿಕೆ ಜನರ ಮನಸ್ಸನ್ನು ಸೆಳೆಯುತ್ತದೆ. ಸಾಧು ಸ್ವಭಾವ, ಆಪ್ತತೆ, ಬಹಳ ಎತ್ತರಕ್ಕೇರಿದ್ದರೂ ಒಂದೇ ತರದ ಗುಣ ನಡತೆ, ಗಾಂಭೀರ್ಯ ರಹಿತ ವದನ, ಮಗುವಿನಂತಹ ಮುಗ್ಧತೆ ಎಲ್ಲರನ್ನೂ ಸೆಳೆಯುತ್ತದೆ. ದೆಹಲಿಗೆ ಪ್ರಶಸ್ತಿ ಸ್ವೀಕರಿಸಲು ಹೋಗಬೇಕಾದರೆ ಕೆಲವೊಂದು ಕಟ್ಟುಪಾಡುಗಳಿವೆ. ಜಿಲ್ಲಾಡಳಿತ ಅದಕ್ಕೆ ವ್ಯವಸ್ಥೆ ಮಾಡುತ್ತದೆ. ವಿಮಾನ ಟಿಕೇಟು ನೀಡಲಾಗುತ್ತದೆ. ಪ್ರಶಸ್ತಿ ಸ್ವೀಕರಿಸುವವರ ಜೊತೆಗೆ ಸಹಾಯಕ್ಕೆ ಇನ್ನೊಬ್ಬರನ್ನು ಕರಕೊಂಡು ಹೋಗುವ ವ್ಯವಸ್ಥೆ ಇದೆ. ದೆಹಲಿಯಲ್ಲಿ 7 ಸ್ಟಾರ್ ಹೋಟೆಲ್ ನಲ್ಲಿ ತಂಗುವ ವ್ಯವಸ್ಥೆ ಮತ್ತು ಆತಿಥ್ಯವಿದೆ. ಮನೆಯಿಂದ ಪ್ರಯಾಣಿಸುವುದರಿಂದ ಹಿಡಿದು ಪುನಃ ಮನೆಗೆ ತಲುಪುವ ತನಕ ಎಲ್ಲಾ ವ್ಯವಸ್ಥೆ ಸರಕಾರದ್ದೆ.

ಇವೆಲ್ಲಕ್ಕಿಂತಲೂ ಮೀರಿ ನಮ್ಮ ಸಂಸತ್ ಸದಸ್ಯರು ದೆಹಲಿಯಲ್ಲಿ ತನ್ನ ಸಂಸದ್ ಮನೆಯಲ್ಲಿ ಹೆಚ್ಚುವರಿಯಾಗಿ ಉಳಿಯುವಂತೆ ವಿನಂತಿಸಿದ್ದರು. ಆದರೆ ಆರೋಗ್ಯದ ಸಮಸ್ಯೆ ಇರುವುದರಿಂದ ನಿಲ್ಲಲಾಗದು ಎಂದು ಪ್ರಶಸ್ತಿ ಪಡೆದ ದಿನವೇ ಹಾಜಬ್ಬ ತವರಿಗೆ ವಾಪಸಾಗಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರ ಶಿಫಾರಸ್ಸು ಹಾಗೂ ಸಂಸತ್ ಸದಸ್ಯರ ಸಹಕಾರದಿಂದ ಪದ್ಮಶ್ರೀಗೆ ಭಾಜನರಾದ ಹರೇಕಳ ಹಾಜಬ್ಬರ ಆ ಕ್ಷಣದ ರಾಷ್ಟ್ರಪತಿ ಭವನದ ವೀಡಿಯೋಗಳನ್ನು ಬಹುತೇಕ ಮಂದಿ ವೀಕ್ಷಿಸಿರಬಹುದು. ಹಾಜಬ್ಬ ಪಾದರಕ್ಷೆಯನ್ನು ಊರಿ ಭಯ ಭಕ್ತಿಯಿಂದ ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿ ಪಡೆಯುವುದನ್ನು ನೋಡುವಾಗ ಕಣ್ತುಂಬುತ್ತದೆ. ಅದೇ ಬಿಳಿಯಂಗಿ ಮತ್ತು ಬಿಳಿ ಲುಂಗಿ. ಹೆಚ್ಚುವರಿಯೆಂದರೆ ಹೆಗಲಿಗೊಂದು ಶಾಲು ಅಷ್ಟೇ. ‘ಪದ್ಮ’ ಪದಕ ಪಡೆಯುವಾಗ ಅವರ ಮುಖದಲ್ಲಿದ್ದ ನಯ ವಿನಯತೆ, ದುಗುಡ ದುಮ್ಮಾನ, ಆಸೆ ಆಕಾಂಕ್ಷೆ, ಆನಂದ ಅನುಭೂತಿ, ಧನ್ಯತಾ ಭಾವ ವರ್ಣಿಸಲಸಾಧ್ಯ. ಹೆಸರು ಕರೆದ ಹಾಗೆ ಪುಟ್ಟ ಮಗುವಿನಂತೆ ರಾಷ್ಟ್ರಭವನದ ವೇದಿಕೆ ಏರಿದ ಹಾಜಬ್ಬ ಭಾವುಕರಾಗಿದ್ದರು. ಫುಲ್ ಕನ್’ಫ್ಯೂಶನ್. ರಾಷ್ಟ್ರಪತಿಯವರು ಪದ್ಮಶ್ರೀ ವಿತರಿಸುವಾಗ ಫೋಟೋ ಕಡೆ ಮುಖ ತಿರುಗಿಸಿ ಎಂದು ಕಣ್ಸನ್ನೆ ಮಾಡಿದರೂ ಹಾಜಬ್ಬ ಈ ಲೋಕದಲ್ಲಿರಲಿಲ್ಲ. ಅವರದೇ ಜಗತ್ತಲ್ಲಿ ತೇಲಾಡುತ್ತಿದ್ದರು.

ಅಂದ ಹಾಗೇ…; ‘ಪದ್ಮ’ ಪುರಸ್ಕಾರ ಪ್ರಾರಂಭ ಆದದ್ದು 1954ರಲ್ಲಿ. ಈತನಕ 3,225 ಗಣ್ಯರಿಗೆ ಪದ್ಮಶ್ರೀ ಪುರಸ್ಕಾರ ನೀಡಲಾಗಿದೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’. ನಂತರದ ಸ್ಥಾನ ಪದ್ಮ ವಿಭೂಷಣ. ಮೂರನೇ ಸ್ಥಾನ ಪದ್ಮ ಭೂಷಣ. ನಾಲ್ಕನೇಯ ಅತ್ಯುನ್ನತ ಪ್ರಶಸ್ತಿ ‘ಪದ್ಮಶ್ರೀ’. ಪದ್ಮ ಪ್ರಶಸ್ತಿಗೆ ಯಾವುದೇ ಗೌರವಧನ/ನಗದು ನೀಡಲಾಗುತ್ತಿಲ್ಲ. ಯಾವ ಸೌಕರ್ಯಾನೂ ಮುಖ್ಯವಲ್ಲ. ಆ ಪ್ರಶಸ್ತಿಯೇ ಗೌರವ. ಸ್ವರ್ಣಲೇಪನ ಪದಕವೇ ಆಸ್ತಿ. ಪದಕದಲ್ಲಿ ‘ಪದ್ಮ’ (ಕಮಲ)ದ ಕೆತ್ತನೆ, ಭಾರತದ ಲಾಂಛನವಿದೆ. ‘ಪದ್ಮ’ ‘ಶ್ರೀ’ ಮತ್ತು ‘ಸತ್ಯ ಮೇವ ಜಯತೇ’ ಎಂದು ದೇವನಗರಿ ಲಿಪಿಯಲ್ಲಿ ಮುದ್ರಿಸಲಾಗಿದೆ. ‘ಪದ್ಮಶ್ರೀ’ ಎಂಬ ಆಸ್ತಿಯನ್ನು ಹಣದಿಂದ ತೂಗಲು ಸಾಧ್ಯವಿಲ್ಲ. ಬೆಲೆ ಕಟ್ಟಲಾಗದ ಅಮೂಲ್ಯ ರತ್ನವದು.