ರಾಹುಲ್ ಗಾಂಧಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ.

0
255

ನವ ದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಕೋವಿಡ್ ಸೋಂಕು ದೇಶದಲ್ಲಿ ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದ ವಯನಾಡಿನ ಕಾಂಗ್ರೆಸ್ ಸಂಸದ ಗಾಂಧಿ, ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ವಿರುದ್ಧ ಪರೋಕ್ಷವಾಗಿ ಟ್ವೀಟ್ದಾಳಿ ಮಾಡಿದ್ದಾರೆ.

ತಮ್ಮ ಟ್ವೀಟರ್ ಖಾತೆಯ ಮೂಲಕ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವುದು ಆತಂಕಕಾರಿಯಾಗಿದೆ. ಸೋಂಕಿನ ಮುಂದಿನ ಅಲೆಯನ್ನು ತಪ್ಪಿಸಲು ಲಸಿಕಾ ಅಭಿಯಾನಕ್ಕೆ ವೇಗ ನೀಡಬೇಕು ಎಂದು ಹೇಳಿದ್ದಲ್ಲದೇ, ಸೋಂಕಿನಿಂದ ನಿಮ್ಮ ಬಗ್ಗೆ ನೀವೆ ಜಾಗೃತೆ ವಹಿಸಿಕೊಳ್ಳಿ, ಯಾಕೆಂದರೇ ಕೇಂದ್ರ ಸರ್ಕಾರ ಆಸ್ತಿ ಮಾರಾಟದಲ್ಲಿ ನಿರತವಾಗಿದೆ ಎಂದು ಕಿಡಿ ಕಾರಿದ್ದಾರೆ.

ನಿನ್ನೆ (ಬುಧವಾರ, ಆಗಸ್ಟ್ 25) ಕೂಡ ರಾಹುಲ್ ಗಾಂಧಿ ಈ ಕುರಿತು ಅವರು ಕೇಂದ್ರವನ್ನು ಆರೋಪಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಸ್ತಾಪಿತ “ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ”ಯ ಮೂಲಕ ಭಾರತದಲ್ಲಿರುವ ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಲು ಹೊರಟಿದೆ ಎಂದಿದ್ದರು.

ಇನ್ನು, ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 46,164 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಬುಧವಾರಕ್ಕಿಂತ ಶೇ.22ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಳವಾದಂತಾಗಿದೆ. ಮಾತ್ರವಲ್ಲದೇ ಸೋಂಕಿನಿಂದ ಕಳೆದೊಂದು ದಿನದಲ್ಲಿ 607 ಮಂದಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಇಂದು (ಗುರುವಾರ, ಆಗಸ್ಟ್ 26) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.