ಹಳಿ ತಪ್ಪಿದ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು – ಪ್ರಯಾಣಿಕರು ಅಪಾಯದಿಂದ ಪಾರು

0
198

ಬೆಂಗಳೂರು : ಗುಡ್ಡ ಕುಸಿದ ಪರಿಣಾಮ ಕಣ್ಣೂರು-ಯಶವಂತಪುರ ನಡುವಿನ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಹಲವು ರೈಲುಗಳ ಮಾರ್ಗ ಬದಲಾವಣೆಯಾಗಿದೆ. ಶುಕ್ರವಾರ ಮುಂಜಾನೆ 3.45ರ ಸುಮಾರಿಗೆ ತಮಿಳುನಾಡಿನ ಧರ್ಮಾವರಂ ಜಿಲ್ಲೆಯ ತೆಪ್ಪೊಡಿ-ಸಿವಾಡಿ ನಡುವಿನ ಪ್ರದೇಶದಲ್ಲಿ ಕಣ್ಣೂರು- ಯಶವಂತಪುರ (07390) ನಡುವಿನ ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಹಳಿ ತಪ್ಪಿವೆ.

ರೈಲಿನಲ್ಲಿದ್ದ ಎಲ್ಲಾ 2,348 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ರೈಲು ಹಳಿ ತಪ್ಪಿದ್ದು, ಯಾವುದೇ ಅನಾಹುತವಾಗಿಲ್ಲ. ರೈಲು ಹಳಿ ತಪ್ಪಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಎಲ್ಲಾ 2348 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾರೂ ಸಹ ಗಾಯಗೊಂಡಿಲ್ಲ ಎಂದು ನೈಋತ್ಯ ರೈಲ್ವೆ ಹೇಳಿದೆ.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರ ಸಂಚಾರಕ್ಕಾಗಿ ಬಸ್‌ಗಳ ವ್ಯವಸ್ಥೆಯನ್ನು ಇಲಾಖೆ ಮಾಡಿದೆ.ಕಣ್ಣೂರಿನಿಂದ ಗುರುವಾರ ಸಂಜೆ 6.05ಕ್ಕೆ ರೈಲು ಹೊರಟಿತ್ತು. ನವೆಂಬರ್ 12ರಂದು ಮುಂಜಾನೆ 3.50ರ ಸುಮಾರಿಗೆ ರೈಲು ಸಾಗುತ್ತಿದ್ದಾಗ ಗುಡ್ಡ ಕುಸಿದಿದೆ. ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಕಲ್ಲುಗಳು ಸಿಲುಕಿವೆ. ಬೆಂಗಳೂರು ರೈಲು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಂ ಸಿಂಗ್‌ ಮತ್ತು ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿದೆ. ಸೇಲಂನ ರೈಲ್ವೆ ವಿಭಾಗದ ತಂಡ ಸಹ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದೆ.