3 ವಾರಗಳ ಅಂತರದಲ್ಲಿ 2 ಮೆಡಿಕಲ್ ಕ್ಯಾಂಪ್, ಒಂದು ಮಸೀದಿಯಲ್ಲಿ, ಇನ್ನೊಂದು ಇಹಪರ ಶಿಕ್ಷಣ ಸಂಸ್ಥೆಯಲ್ಲಿ, ಮಾದರಿಯಾದ ಹಾನಗಲ್ಲಿನ ಅಲ್ ಹಿದಾಯ ಎಜುಕೇಶನ್ ಟ್ರಸ್ಟ್

0
208

✒️ ರಫೀಕ್ ಮಾಸ್ಟರ್

ಮಸೀದಿ ಅಲ್ಲಾಹನ ಭವನ. ಅದು ಸಮುದಾಯದ ಅಭಿವೃದ್ಧಿ ಕೇಂದ್ರ. ಅಲ್ಲಾಹನ ಆರಾಧನೆಯ ಜೊತೆಗೆ ಮಸೀದಿ ಕೇಂದ್ರವಾಗಿ ಏನೆಲ್ಲಾ ಸಾಮುದಾಯಿಕ ಅಭಿವೃದ್ಧಿಯ ಕೆಲಸಗಳನ್ನು ಮಾಡಬಹುದು ಎಂಬುದನ್ನು ಸಾವಿರದ ನಾನೂರು ವರ್ಷಗಳ ಹಿಂದೆಯೇ ಪ್ರವಾದಿ ಮುಹಮ್ಮದ್ (ಸ.ಅ) ರವರು ತನ್ನ ಮದೀನಾ ಮಸೀದಿ ಯಲ್ಲಿ ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. ನೆರೆ, ಪ್ರಾಕೃತಿಕ ವಿಕೋಪ, ಕೊರೊನ ದಂತ ಸಂದರ್ಭದಲ್ಲಿ ನಮ್ಮ ದೇಶದಲ್ಲೂ ಕೂಡ ಅನೇಕ ಮಸೀದಿಗಳು ನಿರಾಶ್ರಿತರಿಗೆ ಆಶ್ರಯ ಕೇಂದ್ರವಾಗಿ ಮತ್ತು ಸೇವಾ ಕೇಂದ್ರವಾಗಿ ಸೇವೆ ಸಲ್ಲಿಸಿ ಬಹಳಷ್ಟು ಪ್ರಶಂಸೆಯನ್ನು ಪಡೆದುಕೊಂಡಿವೆ.

ಮೂರು ವಾರಗಳ ಹಿಂದೆ ಹಾನಗಲ್ಲಿನ ಶಾಫಿ ಮಸೀದಿಯಲ್ಲಿ ಮಂಗಳೂರಿನ ಯೆನೆಪೋಯಾ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ನಡೆಯಿತು. ಮಸೀದಿಯ ಮೇಲಂತಸ್ತಿ ನಲ್ಲಿ ನಡೆದ ಈ ಶಿಬಿರದಲ್ಲಿ ಜಾತಿ ಮತ ಧರ್ಮ ಭೇದವಿಲ್ಲದೆ ಹಾನಗಲ್ ಪರಿಸರದ ಸುಮಾರು ಐನೂರು ಮಂದಿ ತಪಾಸಣೆ ನಡೆಸಿಕೊಂಡು ಉಚಿತ ಔಷಧಿಗಳನ್ನು ಪಡೆದುಕೊಂಡರು. ಮಸೀದಿಯ ಬಾಗಿಲನ್ನು ಸರ್ವ ಧರ್ಮೀಯರಿಗೆ ಆರೋಗ್ಯ ಸೇವೆ ನೀಡುವ ಸಲುವಾಗಿ ತೆರೆಯಲಾಯಿತು.

ಇದೇ ಅದಿತ್ಯವಾರ ಹಾನಗಲ್ಲಿನ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಆಫ್ ಕ್ಯಾಂಪಸ್ ನಲ್ಲಿ ಮತ್ತೊಂದು ಮೆಡಿಕಲ್ ಕ್ಯಾಂಪ್ ನಡೆಯಿತು. ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ನಡೆದ ಈ ಉಚಿತ ಶಿಬಿರದಲ್ಲಿ ಸುಮಾರು ಒಂದು ಸಾವಿರ ಮಂದಿ ಉಚಿತ ತಪಾಸಣೆಯನ್ನು ಮಾಡಿಸಿಕೊಂಡು ಉಚಿತ ಔಷಧಿಗಳನ್ನು ಪಡೆದುಕೊಂಡರು. ಒಂದೇ ಕ್ಯಾಂಪಸ್ ನಲ್ಲಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ಉಚಿತವಾಗಿ ನೀಡಿ ಹುದವಿಗಳನ್ನು ಸೃಷ್ಟಿ ಮಾಡುವ ಈ ಸುಂದರ, ವಿಶಾಲ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಉಚಿತ ಮೆಡಿಕಲ್ ಕ್ಯಾಂಪ್ ಗೆ ಸರ್ವ ಧರ್ಮೀಯರು ಬಂದು ತಜ್ಞ ವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿಕೊಂಡರು. ತಲೆಯಲ್ಲಿ ಬಿಳಿ ಟೊಪ್ಪಿ, ಮೈಮೇಲೆ ಬಿಳಿ ವಸ್ತ್ರ ಧರಿಸಿದ ಕ್ಯಾಂಪಸ್ಸಿನ ವಿದ್ಯಾರ್ಥಿಗಳ ನಗುಮೊಗದ ಸೇವೆ ಎಲ್ಲರ ಮನಸ್ಸಿಗೆ ಖುಷಿ ನೀಡುತ್ತಿತ್ತು. ಎರಡೂ ವೈದ್ಯಕೀಯ ಕ್ಯಾಂಪ್ ಗಳಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಮಸೀದಿ,ಮದ್ರಸ ಮತ್ತು ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಬಗ್ಗೆ ತಪ್ಪು ಗ್ರಹಿಕೆಗಳು ಇರುವಂತಹ ಸಂದರ್ಭದಲ್ಲಿ ಸಂಸ್ಥೆಯ ಬಾಗಿಲನ್ನು ಎಲ್ಲರಿಗೂ ತೆರೆದು ಇಂತಹ ಉತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಇಸ್ಲಾಮಿನ ನೈಜ ಆಶಯವನ್ನು ಎಲ್ಲರಿಗೂ ತಿಳಿಯಪಡಿಸಲು ಸಾಧ್ಯ. ಸಾಮಾನ್ಯ ಜನತೆಯಲ್ಲಿ ಇರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಲು ಸಾಧ್ಯ. ಇಸ್ಲಾಮ್ ಅಂದರೆ ಶಾಂತಿಯ, ಪ್ರೀತಿಯ, ಸೇವೆಯ ಮತ್ತು ಪರೋಪಕಾರದ ಧರ್ಮ. ಅದು ಸರ್ವ ಮನುಕುಲವನ್ನು ಗೌರವಿಸುತ್ತದೆ. ಮಸೀದಿ ಅಲ್ಲಾಹನ ಇಬಾದತ್ ಕೇಂದ್ರದ ಜೊತೆಗೆ ಅಲ್ಲಾಹನ ಸೃಷ್ಟಿಗಳಿಗೆ ಖಿದ್ಮತ್ ಮಾಡುವ ಕೇಂದ್ರ. ಶಿಕ್ಷಣ ಸಂಸ್ಥೆಗಳು ಜ್ಞಾನ ಪ್ರಸಾರದ ಜೊತೆಗೆ ಸಮಾಜ ಸೇವಾ ಚಟುವಟಿಕೆಗಳನ್ನು ಮಾಡುವ ಕೇಂದ್ರ ಎಂಬುದನ್ನು ಹಾನಗಲ್ಲಿನ ಅಲ್ ಹಿದಾಯ ಎಜುಕೇಶನ್ ಟ್ರಸ್ಟ್ ನಿರೂಪಿಸಿದೆ.

ಹೀಗೆ ನಿರಂತರ ಸಾಮಾಜಿಕ ಚಟುವಟಿಕೆಗಳ ಮೂಲಕ ಸರ್ವರ ಪ್ರೀತಿಗೆ ವಿಶ್ವಾಸಕ್ಕೆ ಪಾತ್ರರಾದ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಕರೀಮ್ ಎಚ್ ಕೆಎಚ್ ಶಿರಸಿ, ಅವರ ಹಿರಿಯ ಪುತ್ರ ಉದ್ಯಮಿ ಮುನೀರ್ ಹಾಜಿ ಶಿರಸಿ, ಇನ್ನೋರ್ವ ಪುತ್ರ ಶಿರಸಿಯ ಎಚ್ ಕೆಎಚ್ ಮೆಮೋರಿಯಲ್ ಪ್ರಶಾಂತಿ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞ ಡಾ. ಝಹೀರ್ ಅಹ್ಮದ್, ಅಳಿಯ ಮೊಹಮ್ಮದ್ ಶರೀಫ್ ಮಂಗಳೂರು, ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಪ್ರಾಂಶುಪಾಲರಾದ ಶಫೀಕ್ ಹುದವಿ ಮತ್ತು ಅವರ ಹುದವಿಗಳ ತಂಡ, ಶಿರಸಿ ಶಾಫಿ ಮಸೀದಿಯ ಇಮಾಮ್ ಉಮರುಲ್ ಫಾರೂಕ್ ಮದನಿ, ತಲ್ಹತ್ ಹುದವಿ ಶಿರಸಿ ಮೊದಲಾದವರ ನಿಸ್ವಾರ್ಥ ಸೇವೆಯನ್ನು ಮನಸಾರೆ ಅಭಿನಂದಿಸಿ ಅವರಿಗಾಗಿ ಪ್ರಾರ್ಥಿಸುತ್ತಿದ್ದೇನೆ.

ನಮ್ಮ ಸಂಪತ್ತು, ಜ್ಞಾನ, ಆರೋಗ್ಯ ಮತ್ತು ಆಯುಷ್ಯ ಎಲ್ಲವನ್ನೂ ಅಲ್ಲಾಹನ ದಾರಿಯಲ್ಲಿ ಒಳಿತಿನ ಕೆಲಸಗಳಲ್ಲಿ ತೊಡಗಿಸಲು ಸರ್ವಶಕ್ತನು ಅನುಗ್ರಹಿಸಲಿ.