13ನೇ ಆವೃತ್ತಿಯ ‘ಏರೋ‌ ಇಂಡಿಯಾ 2021’ ವೈಮಾನಿಕ ಪ್ರದರ್ಶನಕ್ಕೆ ಅದ್ಧೂರಿ‌ಯಾಗಿ ಚಾಲನೆ

ಇದೇ ಮೊದಲ‌ ಬಾರಿಗೆ ಹೈಬ್ರಿಡ್ ಏರ್ ಶೋ ನಡೆಸಲಾಗುತ್ತಿದೆ. ಉದ್ಘಾಟನಾ ಸಮಾರಂಭವನ್ನು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ನೆರವೇರಿಸಿದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ, ಸಿಡಿಎಸ್ ಬಿಪಿನ್ ರಾವತ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.‌ ಜೊತೆಗೆ ಹಿಂದೂ ಮಹಾಸಾಗರ ರಾಷ್ಟ್ರಗಳ 28 ರಕ್ಷಣಾ ಸಚಿವರು ಹಾಗೂ ವಾಯು ಪಡೆ ಮುಖ್ಯಸ್ಥರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ನಂತರ ಮಾತನಾಡಿದ ರಕ್ಷಣಾ‌ ಸಚಿವ ರಾಜ್‌ನಾಥ್ ಸಿಂಗ್, ಏರ್ ಶೋ ಆಯೋಜನೆ ಮಾಡಿರುವ ಸಿಎಂ‌ ಯಡಿಯೂರಪ್ಪ ಮತ್ತು ಬೆಂಗಳೂರು‌ ನಗರಕ್ಕೆ ಅಭಿನಂದನೆ ತಿಳಿಸುತ್ತಾ, ಏಷ್ಯಾದಲ್ಲೇ ಅತ್ಯಂತ ಅತಿ ದೊಡ್ಡ ಏರೋ ಶೋ ಇದಾಗಿದೆ. ಬಸವಣ್ಣ, ವಿಶ್ವೇಶ್ವರಯ್ಯ ಹುಟ್ಟಿದ ನಾಡು ಕರುನಾಡು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ ವಿಶ್ವದಲ್ಲೇ ಉನ್ನತ ಮಟ್ಟದಲ್ಲಿದೆ. ಈಗಾಗಲೇ ಭಾರತದ ವ್ಯಾಕ್ಸಿನ್​ಗೆ ಬೇರೆ ದೇಶಗಳಿಂದಲೂ ಬೇಡಿಕೆ ಬರುತ್ತಿದೆ. ಭಾರತ ದೇಶವು ವಿಶ್ವದ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದೆ. 2021ರ ಏರ್​ ಶೋ ಮೊದಲ ಹೈಬ್ರಿಡ್ ಏರೋ ಎಂಬ ಖ್ಯಾತಿ ಗಳಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಲಿದೆ ಎಂದರು.

ಇರಾನ್, ಮಾಲ್ಡೀವ್, ಉಕ್ರೇನ್ ದೇಶ ಸೇರಿದಂತೆ ಹಲವು ದೇಶಗಳು ಕೂಡ ಈ ಏರ್​ ಶೋನಲ್ಲಿ ಭಾಗಿಯಾಗಿವೆ. 130 ಮಿಲಿಯನ್ ಡಾಲರ್ ರಕ್ಷಣೆಗೆ ಮೀಸಲಿಡಲು ಸಿದ್ಧವಿದ್ದು, ಹೊಸ ತಂತ್ರಜ್ಞಾನದ ಮೂಲಕ ಸೇನೆ ಬಲಪಡಿಸಲು ಸರ್ಕಾರ ಬದ್ಧವಿದೆ. ಈಗಾಗಲೇ 83 ತೇಜಸ್ ವಿಮಾನಗಳಿಗೆ ಆರ್ಡರ್ ಬಂದಿರುವುದು ಅತ್ಯಂತ ಸಂತಸದ ವಿಚಾರ.

35 ತೇಜಸ್ ಮಾರ್ಕ್ 1ಎ ಯುದ್ಧ ವಿಮಾನಗಳನ್ನು ಹೆಚ್‌ಎಎಲ್ ನಿರ್ಮಾಣ ಮಾಡಿಕೊಡಲಿದೆ. ಇದು ದೇಶದ ಭದ್ರತೆಗೆ ಅನುಕೂಲವಾಗಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕಾರಿಯಗಲಿದೆ. ರಕ್ಷಣಾ ವಲಯದಲ್ಲಿ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯೊಯುವ ಗುರಿ ಕೂಡ ಹೊಂದಲಾಗಿದೆ ಎಂದರು.

ಈ ಕುರಿತು ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಕೋವಿಡ್-19 ಹಿನ್ನೆಲೆ ರಾಜ್ಯ ಸರ್ಕಾರ ಎಲ್ಲರ ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಏರ್ ಶೋ ನಡೆಸುತ್ತಿದೆ. 540 ಪ್ರದರ್ಶಕರು, 77 ವಿದೇಶಿ ಪ್ರದರ್ಶಕರು ಭಾಗಿಯಾಗಲಿದ್ದಾರೆ. ಬೆಂಗಳೂರು ವಿದ್ಯಾಭ್ಯಾಸ, ಸ್ಟಾರ್ಟ್ ಅಪ್ ಮತ್ತು ವಹಿವಾಟಿಗೆ ಅತ್ಯುತ್ತಮ ಸ್ಥಳ.

ಭಾರತದ‌ ಒಟ್ಟಾರೆ ವೈಮಾನಿಕ ತಯಾರಿಕೆಯಲ್ಲಿ 65% ಕರ್ನಾಟಕದಲ್ಲೇ ಆಗುತ್ತದೆ. 1 ಸಾವಿರ ಎಕರೆ ವಿಸ್ತೀರ್ಣದ ಏರೋ ಸ್ಪೇಸ್ ಪಾರ್ಕ್ ದೇವನಹಳ್ಳಿಯಲ್ಲಿ ಸಿದ್ಧವಾಗುತ್ತಿದೆ. ಎರಡು ಅಂತಾರಾಷ್ಟ್ರೀಯ ಮತ್ತು ಐದು ಡೊಮೆಸ್ಟಿಕ್ ವಿಮಾನ ನಿಲ್ದಾಣ ಕರ್ನಾಟಕದಲ್ಲಿ ಈಗಾಗಲೇ ಇದೆ.

ಪ್ರಧಾನಿ‌‌ ಮೋದಿ ಆತ್ಮ ನಿರ್ಭರ್ ಭಾರತದ ಕನಸು ಕಂಡಿದ್ದಾರೆ, ಅದಕ್ಕೆ ಪೂರಕವಾಗಿ ಕರ್ನಾಟಕವೂ ನಡೆದುಕೊಳುತ್ತಿದೆ. ಕೋವಿಡ್ ಸಂದರ್ಭದಲ್ಲೂ ಏರ್ ಶೋ ಬೆಂಗಳೂರಲ್ಲಿ ನಡೆಸಲು ನಿರ್ಧರಿಸಿರುವುದಕ್ಕೆ ರಕ್ಷಣಾ ಇಲಾಖೆಗೆ ಧನ್ಯವಾದ ತಿಳಿಸಿದರು.

LEAVE A REPLY

Please enter your comment!
Please enter your name here