
ಯುಎಇ ಸೇರಿದಂತೆ 20 ರಾಷ್ಟ್ರಗಳಿಂದ ಸೌದಿಗೆ ಪ್ರವೇಶ ನಿರ್ಬಂಧಿಸಿ ಸೌದಿ ಸರಕಾರ ಆದೇಶ ಹೊರಡಿಸಿದ ನಂತರ, ಯುಎಇ ಮೂಲಕ ಸೌದಿಗೆ ತೆರಳಲು ಸಿದ್ಧರಾಗಿ ದುಬೈಯಲ್ಲಿ ಕ್ವಾರೆಂಟೈನ್ ನಲ್ಲಿರುವ ನೂರಾರು ಕವ್ನಡಿಗರು ಸೇರಿದಂತೆ ಸಾವಿರಾರು ಅನಿವಾಸಿಗಳ ಭವಿಷ್ಯವು ಅನಿಶ್ಚಿತತೆಯಲ್ಲಿದೆ.
ಭಾರತದಿಂದ ಸೌದಿಗೆ ನೇರ ವಿಮಾನಯಾನ ನಿಷೇಧವಿರುವ ಕಾರಣ ಅನೇಕ ಮಂದಿ ಭಾರತೀಯರು ದುಬೈ ಮಾರ್ಗವಾಗಿ ಸೌದಿಗೆ ತೆರಳುತ್ತಿದ್ದರು. ಇವರಿಗೆ ಸೌದಿ ಅರೇಬಿಯಾ ಪ್ರವೇಶಿಸುವ ಮುನ್ನ ದುಬೈಯಲ್ಲಿ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿತ್ತು. ಈಗಾಗಲೇ ಕೆಲವರು 10 ದಿನಗಳ ಕ್ವಾರೆಂಟೈನ್ ಕಳೆದು ಇನ್ನು ಕೆಲವೇ ದಿನಗಳಲ್ಲಿ ಸೌದಿಗೆ ಪ್ರಯಾಣಿಸುವ ಪ್ರಯತ್ನಕ್ಕೆ ಈ ಹೊಸ ನಿರ್ಬಂಧವು ತಣ್ಣೀರೆರಚಿದೆ. 15 ದಿನಗಳ ಪ್ಯಾಕೇಜ್ ನಲ್ಲಿ ದುಬೈಗೆ ತೆರಳಿದ ಅನೇಕರಿಗೆ ಈ ಅವಧಿಯಲ್ಲಿ ತಮ್ಮ ತಮ್ಮ ರೂಮುಗಳನ್ನು ತೊರೆಯಬೇಕಾಗಿದೆ. ಮೊದಲೇ ಒಂದು ವರ್ಷ ಕಾಲ ಉದ್ಯೋಗವಿಲ್ಲದೇ ತಾಯ್ನಾಡಿನಲ್ಲಿ ಕಷ್ಟಪಟ್ಟು ಸಾಲ ಮಾಡಿ ದುಬೈಗೆ ಬಂದ ಅನಿವಾಸಿಗಳು ಮುಂದೆ ತಮ್ಮ ವಾಸ ಹಾಗೂ ಆಹಾರಕ್ಕಾಗಿ ಇತರರನ್ನು ಅವಲಂಭಿಸಬೇಕಾದ ಅಥವಾ ಸಾಮಾಜಿಕ ಸಂಘಟನೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಸೌದಿ ಅರೇಬಿಯಾ ವಿಧಿಸಿರುವ ಈ ಪ್ರಯಾಣ ನಿರ್ಬಂಧವು ತಾತ್ಕಾಲಿಕ ಎನ್ನಲಾಗುತ್ತಿದ್ದರೂ, ರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವ ದೈನಂದಿನ ಕೊವಿಡ್ ಪ್ರಕರಣಗಳನ್ನು ಗಮನಿಸಿದರೆ ಈ ಪ್ರಯಾಣ ನಿರ್ಬಂಧವು ಮತ್ತೆ ಕೆಲವು ದಿನಗಳು ಮುಂದುವರಿಯುವುದರಲ್ಲಿ ಸಂಶಯವಿಲ್ಲ. ಅದಲ್ಲದೇ ಎರಡನೇ ಹಂತದ ಕೊವಿಡ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಫೆಬ್ರವರಿ 5,6 ಹಾಗೂ 7ರಂದು ಸೌದಿ ಅರೇಬಿಯಾದ್ಯಂತ ಲಾಕ್ ಡೌನ್ ಮಾಡಲು ಸೌದಿ ಆರೋಗ್ಯ ಇಲಾಖೆಯು ಆಂತರಿಕ ಸಚಿವಾವಕ್ಕೆ ಶಿಫಾರಸ್ಸು ಮಾಡಿದೆ. ಒಂದು ವೇಳೆ ಈ ನಿರ್ಣಯಕ್ಕೆ ಸೌದಿ ಆಂತರಿಕ ಸಚಿವಾಲಯವು ಸಮ್ಮತಿ ಸೂಚಿಸಿದಲ್ಲಿ ಸೌದಿ ಅರೇಬಿಯಾದಲ್ಲಿ ಮತ್ಕೊಮ್ಮೆ ಲಾಕ್ ಡೌನ್ ಸನ್ನಿಹಿತವಾಗಬಹುದು.