ರಾಜ್ಯ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಆಯ್ಕೆ

► ಅತೀ ಹೆಚ್ಚು ಮತಗಳನ್ನು ಪಡೆದರೂ ಗೆಲ್ಲದ ನಲಪಾಡ್ ಹಾರೀಸ್

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್ ಪುತ್ರ ನಲಪಾಡ್‌ಗೆ ಮುಖಭಂಗವಾಗಿದ್ದು, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದ ನಲಪಾಡ್‌ ಸ್ಪರ್ಧೆಯನ್ನೇ ಎಐಸಿಸಿ ಅನುರ್ಜಿತಗೊಳಿಸಿದೆ. ಈ ಚುನಾವಣೆಯಲ್ಲಿ ನಲಪಾಡ್‌ 64,203 ಮತ ಪಡೆದಿದ್ದರೆ ರಕ್ಷಾ ರಾಮಯ್ಯ 57,271 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ರಕ್ಷಾ ರಾಮಯ್ಯ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ .

ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಎಐಸಿಸಿಯಿಂದ ನಲಪಾಡ್‌ ಸ್ಪರ್ಧೆಯನ್ನೇ ಅನುರ್ಜಿತ ಎಂದು ಘೋಷಣೆ ಮಾಡಲಾಗಿದೆ. ಎಐಸಿಸಿ ಚುನಾವಣಾ ಸಮಿತಿ ಹಾಗೂ ಶಿಸ್ತುಪಾಲನ ಸಮಿತಿ ನಲಪಾಡ್‌ ಹಿನ್ನೆಲೆಯನ್ನು ಗಮನಿಸಿ ಸ್ಪರ್ಧೆಯನ್ನೇ ಅಸಿಂಧುಗೊಳಿಸುವ ತೀರ್ಮಾನ ಮಾಡಿದೆ.

ನಲಪಾಡ್‌ ಸ್ಪರ್ಧೆಯನ್ನು ಅಸಿಂಧುಗೊಳಿಸಿದ ಕಾರಣ ಮಾಜಿ ಸಚಿವ ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಪಟ್ಟ ಸಿಕ್ಕರೆ ಮೂರನೇ ಸ್ಥಾನ ಪಡೆದ ಮಂಜುನಾಥ್ ಉಪಾಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ. ಯೂತ್‌ ಕಾಂಗ್ರೆಸ್‌ ಚುನಾವಣೆ ಜ.10 ರಿಂದ ಜ.12ರವರೆಗೆ ನಡೆದಿತ್ತು.

LEAVE A REPLY

Please enter your comment!
Please enter your name here