ಕಾರವಾರದಲ್ಲಿ ಬಹುಭಾಷಾ ಸಾಂಸ್ಕೃತಿಕ ಸಂಭ್ರಮ-2021

ಒಂದೇ ವೇದಿಕೆಯಲ್ಲಿ ಬ್ಯಾರಿ, ತುಳು, ಕೊಂಕಣಿ, ಕೊಡವ, ಅರೆಭಾಷೆ ಅಕಾಡೆಮಿಗಳ ಸಂಗಮ

ಕಾರವಾರ,ಫೆ.7:
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಹೃದಯವಾಹಿನಿ ಮಂಗಳೂರು ಇದರ ಸಹಯೋಗದಲ್ಲಿ ಕರ್ನಾಟಕ ತುಳು, ಕೊಂಕಣಿ, ಅರೆಭಾಷೆ, ಕೊಡವ ಸಾಹಿತ್ಯ ಅಕಾಡೆಮಿಗಳ ಸಹಕಾರದಲ್ಲಿ “ಬಹುಭಾಷಾ ಸಾಂಸ್ಕೃತಿಕ ಸಂಭ್ರಮ 2021” ಕಾರ್ಯಕ್ರಮವು ಕಾರವಾರ ಜಿಲ್ಲಾ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಬ್ಯಾರಿ ಭಾಷೆಯನ್ನು ಉಳಿಸಲು ಹೊಸ ಹೊಸ ಪ್ರಯತ್ನಗಳು ನಡಿತಿದೆ. ಹೊಸ ಲಿಪಿಯನ್ನು ಕಂಡುಹಿಡಿಯುವ ಮೂಲಕ ಭಾಷೆಯನ್ನು ಉಳಿಸುವ ಜೊತೆಗೆ ಸರ್ಕಾರದಿಂದ ಬ್ಯಾರಿ ಭಾಷೆಗೆ ಮಾನ್ಯತೆ ದೊರಕಿಸಲು ಪ್ರಯತ್ನ ನಡೆಸಲಾಗುತ್ತಿದೆ ಅಂದರು. ಇದೇ ವೇಳೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಅಮ್ಮತಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡವ ಭಾಷೆ ಅನುಪಮ ಸೌಂದರ್ಯ ಹೊಂದಿದೆ. ಒಂದು ಭಾಷೆಯನ್ನು ಮಾತನಾಡುವ ಮೂಲಕ ಉಳಿಸಿಕೊಳ್ಳಬೇಕು ಅಂದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ‌ ಮಾತನಾಡಿ, ಇಂಗ್ಲಿಷ್ ಭಾಷೆಯಿಂದ ಪ್ರಾದೇಶಿಕ ಭಾಷೆಗಳು ಅಪಾಯ ಎದುರಿಸುತ್ತಿದೆ. ಇದರಿಂದ ನಾವು ಮೊದಲು ನಮ್ಮ ಮಕ್ಕಳನ್ನು ತಪ್ಪಿಸಬೇಕಿದೆ ಅಂದರು. ಡಾ. ಜೆ. ಆರ್ ಮನೋಜ್ ಶರ್ಮ ಗುರೂಜಿ ಆಶೀರ್ವಚನ ಮಾಡಿದರು.
ಉತ್ತರ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಜಿಲ್ಲೆಯ (ಪ್ರ) ಸಹಾಯಕ ನಿರ್ದೇಶಕ ಎನ್. ಜಿ. ನಾಯಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತದನಂತರ ಬಹುಭಾಷಾ ವಿಚಾರಗೋಷ್ಠಿ ನಡೆಯಿತು. ಮೊಹಮ್ಮದ್ ಬಡ್ಡೂರ್ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಟಿಯಲ್ಲಿ ರಾಮ ನಾಯ್ಕ್ ಕಾರವಾರ (ಕನ್ನಡ), ಕಾಂತಿ ಶೆಟ್ಟಿ (ತುಳು), ಡಾ. ಅರವಿಂದ್ ಶಾನಬಾಗ (ಕೊಂಕಣಿ), ಪುರುಷೋತ್ತಮ ಕಿರ್ಲಾಯ (ಅರೆಭಾಷೆ), ಡಾ. ಮುಲ್ಲೇಂಗಡ ರೇವತಿ ಪೂವಯ್ಯ (ಕೊಡವ) ವಿಚಾರ ಮಂಡಿಸಿದರು.


ಬಿ.ಎ. ಮೊಹಮ್ಮದ್ ಅಲಿ ಅಧ್ಯಕ್ಷತೆಯಲ್ಲಿ ನಡೆದ
ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ. ಕಾಸರಗೋಡು ಅಶೋಕ್ ಕುಮಾರ್ (ಕನ್ನಡ), ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ (ತುಳು), ನಾಗೇಶ್ ಅಣ್ವೇಕರ (ಕೊಂಕಣಿ), ಕುಡಿಯರ ಮುತ್ತಪ್ಪ (ಕೊಡವ), ಸೀತಾ ಅಮೃತ ರಾಜ್ (ಅರೆಭಾಷೆ) ಕವನ ವಾಚಿಸಿದರು.
ನಂತರ ಹುಸೈನ್ ಕಾಟಿಪಳ್ಳ ಮತ್ತು ತಂಡ (ಬ್ಯಾರಿ), ಗೋ ನಾ ಸ್ವಾಮಿ ಮತ್ತು ತಂಡ (ಕನ್ನಡ), ಕುಂಜಿಲಗೇರಿ ಕಲಾ ತಂಡ (ಕೊಡವ), ಕಲಾಕುಂಬ ಕುಳಾಯಿ (ತುಳು), ಮಿತ್ರ ಬಳಗ ಕಾಯರ್ತೋಡಿ (ಅರೆಭಾಷೆ), ವಿಷ್ಣು ರಾಣೆ ಗುಮುಟಾ ವಾದನ ಕಿನ್ನರ ಕಾರವಾರ (ಕೊಡವ), ವಿಜೇತ ಭಂಡಾರಿ ನೃತ್ಯ ಸ್ವರ ಕಲಾ ಟ್ರಸ್ಟ್ ಕುಮುಟಾ, ಅನುರಾಧ ಹೆಗಡೆ ನೂಪುರ ನೃತ್ಯಶಾಲೆ ಶಿರಸಿ ಇವರಿಂದ ಬಹುಭಾಷಾ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಉ.ಕ. ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ರೋಹಿದಾಸ್ ನಾಯಕ್, ಗೋವಾ ಕೇಸರಿಯ ಸಂಪಾದಕ ಶ್ರೀನಿವಾಸ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಭಾಷಾ ಸಾಧಕರಾದ ಲ. ಇಬ್ರಾಹಿಂ (ಕನ್ನಡ), ಸೋಶಿಯಲ್ ಫಾರೂಕ್ (ಬ್ಯಾರಿ), ಪ್ರಭಾಕರ್ ಕಲ್ಯಾಣಿ (ತುಳು), ಪ್ರೇಮಾನಂದ ಗಡಕರ (ಕೊಂಕಣಿ), ಓಡಿಯಂಡ ಪೊನ್ನಪ್ಪ (ಕೊಡವ), ಕುದುಕುಳಿ ಮಿಲನ ಭರತ್ (ಅರೆಭಾಷೆ) ಇವರುಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಬ್ಯಾರಿ, ತುಳು, ಕೊಂಕಣಿ, ಕೊಡವ, ಅರೆಭಾಷೆ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಹುಸೈನ್ ಕಾಟಿಪಳ್ಳ ಮತ್ತು ಪ್ರತಿಭಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಶಂಶೀರ್ ಬುಡೋಳಿ ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here