ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನದ ಅಂಗವಾಗಿ ಉಳ್ಳಾಲದಲ್ಲಿ ನಡೆದ ಯುನಿಟಿ ಮಾರ್ಚ್ ಕಾರ್ಯಕ್ರಮದಲ್ಲಿ ಕೋಮು ಭಾವನೆ ಕೆರಳಿಸುವ ಹುನ್ನಾರ, ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂಬ ಆರೋಪದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಪಥ ಸಂಚಲನದ ವೇಳೆ ಆರೆಸ್ಸೆಸ್ ಹಾಗೂ ಬಾಬರಿ ಮಸೀದಿ ತೀರ್ಪಿನ ವಿರುದ್ಧ ಘೋಷಣೆ, ಪರವಾನಿಗೆ ಇಲ್ಲದೇ ಮೆರವಣಿಗೆ ನಡೆಸಿ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನ ಮತ್ತು 400ಕ್ಕೂ ಅಧಿಕ ಸಮವಸ್ತ್ರಧಾರಿ ತಂಡ ಪೊಲೀಸರ ಸೂಚನೆಯನ್ನು ಪಾಲಿಸದೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೂ ತೊಂದರೆ ನೀಡಿದ್ದಾರೆ ಎಂದು ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಪೊರೇಟರ್ ಮುನೀಬ್ ಬೆಂಗ್ರೆ, ಅಬ್ದುಲ್ ಖಾದರ್ ಕುಳಾಯಿ, ಶಹೀದ್ ದೇರಳಕಟ್ಟೆ, ಸಫ್ವಾನ್, ಇಮ್ತಿಯಾಝ್ ಕೋಟೆಪುರ, ಖಲೀಲ್ ಕಡಪ್ಪರ, ರಮೀಝ್ ಕೋಡಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.