ಎಸ್‌ಡಿಪಿಐ-ಪಿಎಫ್‌ಐ ಮಾತಿಗೆ ಮರುಳಾಗಬೇಡಿ: ಸಿದ್ದರಾಮಯ್ಯ

ಮಂಗಳೂರು, : ಜಾತ್ಯತೀತ ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿ ಬೆಳವಣಿಗೆಗೆ ಶಕ್ತಿ ತುಂಬುವ ಎಸ್‌ಡಿಪಿಐ ಪಕ್ಷ ಮತ್ತು ಪಿಎಫ್‌ಐ ಸಂಘಟನೆಯ ಮಾತಿಗೆ ಮರುಳಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಪುರಭವನದಲ್ಲಿ ಸೋಮವಾರ ನಡೆದ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್‌ರ ಪದಗ್ರಹಣ ಸಮಾರಂಭ ಹಾಗೂ ಭಾವೈಕ್ಯತಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೋಮುವಾದಿಗಳು ಇರುವ ಕಡೆ ಎಂದೂ ಶಾಂತಿ ನೆಲೆಸದು. ಸ್ವಾರ್ಥಕ್ಕಾಗಿ ಜನರಿಗೆ ತಪ್ಪು ಮಾಹಿತಿ ನೀಡುವ ಮತ್ತು ಸಂವಿಧಾನದ ನಾಶಕ್ಕೆ ಪಣತೊಟ್ಟಿರುವ ಹಿಂದುತ್ವವಾದಿಗಳಂತೂ ಭಾರತೀಯನಾಗಲು ಸಾಧ್ಯವೇ ಇಲ್ಲ ಎಂದ ಸಿದ್ದರಾಮಯ್ಯ, ಈ ರಾಷ್ಟ್ರವನ್ನು ಎಂದಿಗೂ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ನಿರ್ಮಿತ ಸಂವಿಧಾನವು ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಡಿಜೆ ಹಳ್ಳಿ, ಕೆಜೆ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಪಿಎಫ್‌ಐ, ಎಸ್‌ಡಿಪಿಐ ಕೈವಾಡದ ಬಗ್ಗೆ ಸಾಕ್ಷ್ಯ ಇದೆ ಎಂದು ಹೇಳಿ ಬಿಜೆಪಿಗರು ಸುಮ್ಮನಿರುವ ಬದಲು ಕೇಂದ್ರದ ಮೇಲೆ ಒತ್ತಡ ಹೇರಿ ಪಿಎಫ್‌ಐಯನ್ನು ನಿಷೇಧಿಸಲಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಬಿಜೆಪಿಗರು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಮುನ್ನ ಗೋ ಮಾಂಸವನ್ನು ಆಮದು ಮತ್ತು ರಫ್ತು ಮಾಡುವುದನ್ನು ನಿಲ್ಲಿಸಲಿ ಎಂದರಲ್ಲದೆ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಜನರಿಗೆ ನೆಮ್ಮದಿಯೇ ಇರದು ಎಂದು ನುಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಯೀದ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ನಾಸಿರ್ ಹುಸೈನ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಮಾಜಿ ಶಾಸಕ ಜೆ.ಆರ್.ಲೋಬೋ, ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here