ಮಂಗಳೂರು, ಡಿ.31: ಇತ್ತೀಚಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬಿಡುಗಡೆಗೊಳಿಸಿದ ನೂತನ ಬ್ಯಾರಿ ಲಿಪಿ ಹಾಗೂ ಸಂಖ್ಯೆಯನ್ನು ಬಳಸಿಕೊಂಡು 2021ರ ಹೊಸ ವರ್ಷದ ಕ್ಯಾಲೆಂಡರನ್ನು (ಬ್ಯಾರಿ ನಾಲ್ ಕನಕ್ಕ್) ಗುರುವಾರ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ‘ಪ್ರತಿಯೊಂದು ಬ್ಯಾರಿ ಭಾಷಿಕರು ಸುಲಭವಾಗಿ ನೂತನ ಬ್ಯಾರಿ ಲಿಪಿಯನ್ನು ಕಲಿಯಲು ಹಾಗೂ ನೆನಪಿನಲ್ಲಿ ಉಳಿಯಲು ಈ ಬ್ಯಾರಿ ಕ್ಯಾಲೆಂಡರ್ ಸಹಾಯವಾಗಲಿದೆ. ಈ ಐತಿಹಾಸಿಕ ಹೆಜ್ಜೆಗೆ ಬ್ಯಾರಿ ಭಾಷಿಕರು ಬ್ಯಾರಿ ಹಾಗೂ ಬ್ಯಾರಿಯೇತರ ಭಾಷಿಕರು ಸಹಕಾರ ನೀಡಬೇಕೆಂದು ಅವರು ಆಗ್ರಹಿಸಿದರು. ಬ್ಯಾರಿ ಭಾಷಾ ಲಿಪಿ ರಚನಾ, ಸಂಶೋಧನ ಮತ್ತು ಅನುಷ್ಠಾನ ಸಮಿತಿಯ ಸದಸ್ಯರಾದ ಖ್ಯಾತ ಲೇಖಕ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಮಾತನಾಡಿ, ಬ್ಯಾರಿ ಭಾಷೆಯ ನೂತನ ಲಿಪಿಯನ್ನು ಜನಮನಕ್ಕೆ ಪರಿಚಯಿಸುವ ಹೊಸ ಪ್ರಯತ್ನ ಇದಾಗಿದೆ.
ಕಲಿಕಾ ಮತ್ತು ಭೋದನಾ ಕ್ರಮಗಳನ್ನು ಬಿಡುಗಡೆ ಮಾಡಲಾಗುವುದು ಎಂದರು. ಬ್ಯಾರಿ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ.ಅಬೂಬಕರ್ ಸಿದ್ದೀಕಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಸ್ಥಳೀಯ ಭಾಷೆಗಳನ್ನು ಸರ್ಕಾರಗಳು ಪೋಷಿಸಿ ಬೆಳೆಸುತ್ತಿದ್ದು ಬ್ಯಾರಿ ಭಾಷೆಗೂ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದು ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸಿದರು. ಲಿಪಿ ಸಂಶೋಧನಾ ಸಮಿತಿ ಸದಸ್ಯ, ಸಹಾಯಕ ಪ್ರಾಧ್ಯಾಪಕರಾದ ಹೈದರ್ ಆಲಿ ಮಾತನಾಡಿ, ಪ್ರತಿಯೊಬ್ಬರೂ ಸುಲಭವಾಗಿ ಬರೆಯಲು, ಓದಲು ಸಹಾಯಕವಾಗುವ ರೀತಿಯಲ್ಲಿ ಲಿಪಿಯನ್ನು ಸಂಶೋಧಿಸಲಾಗಿದ್ದು ಈ ಕ್ಯಾಲೆಂಡರ್ ಬಿಡುಗಡೆ ನಮ್ಮ ಮೊದಲ ಕಲಿಕಾ ವಿಧಾನಕ್ಕೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಬಶೀರ್ ತಂಡೆಲ್, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ, ರೂಪಾಶ್ರೀ ವರ್ಕಾಡಿ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಮಾಜಿ ಸದಸ್ಯ ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.