ಕೊರೋನ ಸೋಂಕಿಗೆ ಬ್ರಿಟನ್ ತತ್ತರ: ಮೂರನೇ ಲಾಕ್‌ಡೌನ್

ಲಂಡನ್, ಜ.5: ಬ್ರಿಟನ್‌ನಲ್ಲಿ ಸತತ ಏಳು ದಿನಗಳ ಕಾಲ 50 ಸಾವಿರಕ್ಕೂ ಅಧಿಕ ಕೋವಿಡ್-19 ವೈರಸ್ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ರಾತ್ರಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ.

ಪಿಫಿಝರ್/ಬಯೋಎನ್‌ಟೆಕ್ ಮತ್ತು ಆಕ್ಸ್‌ಫರ್ಡ್/ಆಸ್ಟ್ರಾಝೆನಿಕಾ ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ಈಗಾಗಲೇ ಒಪ್ಪಿಗೆ ನೀಡಿ 15 ಲಕ್ಷ ಮಂದಿಗೆ ದೇಶದಲ್ಲಿ ಲಸಿಕೆ ನೀಡಲಾಗಿದೆ. ಒಟ್ಟು 14 ಕೋಟಿ ಲಸಿಕೆ ಖರೀದಿಗೆ ಬ್ರಿಟನ್ ಮುಂದಾಗಿದೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಜಾನ್ಸನ್, “ದೇಶದಲ್ಲಿ ವೈರಸ್ ಸೋಂಕು ಅಪಾಯಕಾರಿ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ಲಾಕ್‌ಡೌನ್ ಅನಿವಾರ್ಯ” ಎಂದು ಘೋಷಿಸಿದರು.

“ಮನೆಯಲ್ಲೇ ಉಳಿಯಿರಿ” ಎಂಬ ಮುಖ್ಯ ಸಂದೇಶದೊಂದಿಗೆ ಬುಧವಾರ ಮುಂಜಾನೆಯಿಂದ ಜಾರಿಯಾಗಲಿರುವ ಲಾಕ್‌ಡೌನ್ ಆರು ವಾರಗಳ ಕಾಲ ಜಾರಿಯಲ್ಲಿರುತ್ತದೆ. ಶಾಲೆಗಳು ಮುಚ್ಚಿರುತ್ತವೆ ಹಾಗೂ ಅಗತ್ಯ ಕಾರಣಗಳಿಗೆ ಹೊರತುಪಡಿಸಿದರೆ ಮನೆಗಳಿಂದ ಹೊರಹೋಗುವಂತಿಲ್ಲ. ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ದೇಶದಲ್ಲಿ 2020ರ ಮಾರ್ಚ್ ಬಳಿಕ ಮೂರನೇ ಲಾಕ್‌ಡೌನ್ ಆಗಿದೆ. ಬೇಸಿಗೆಯಲ್ಲಿ ಸೋಂಕು ಪ್ರಕರಣಗಳು ಇಳಿಕೆಯಾಗಿ ಮತ್ತೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ಎರಡನೇ ಬಾರಿಗೆ ಲಾಕ್‌ಡೌನ್ ಹೇರಲಾಗಿತ್ತು. ಜನವರಿ ಕೊನೆಯ ಅಥವಾ ಫೆಬ್ರವರಿ ಮೊದಲ ವಾರದ ವೇಳೆಗೆ ಬ್ರಿಟನ್‌ನಲ್ಲಿ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಒಂದು ಲಕ್ಷ ದಾಟುವ ನಿರೀಕ್ಷೆ ಇದೆ.

ಇಂಗ್ಲೆಂಡ್, ಸ್ಕಾಟ್ಲೆಂಡ್, ಉತ್ತರ ಐರ್ಲೆಂಡ್ ಮತ್ತು ವೇಲ್ಸ್‌ನ ಮುಖ್ಯ ಆರೋಗ್ಯ ಅಧಿಕಾರಿಗಳು ಹೇಳಿಕೆ ನೀಡಿ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬ್ರಿಟನ್‌ನ ಮುನ್ನೆಚ್ಚರಿಕೆ ಮಟ್ಟ ಲೆವೆಲ್ 4ರಿಂದ ಲೆವೆಲ್ 5ಕ್ಕೆ ಹೆಚ್ಚಿದೆ. ಅಂದರೆ ಆಸ್ಪತ್ರೆಗಳು ಮತ್ತು ಆರೋಗ್ಯ ಮೂಲಸೌಕರ್ಯಗಳ ಮೇಲೆ ಅತ್ಯಧಿಕ ಒತ್ತಡ ಇದೆ ಎಂದು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here