ಮೊಬೈಲ್ ಗೇಮ್ ನಲ್ಲಿ ಶೂಟ್ ಮಾಡುವ ಯುವಕರೇ, ತಾಕತ್ತಿದ್ದರೆ ಝುಬೇರ್ ನೇರೆಂಕಿ ಯವರಂತೆ ಉಗ್ರಗಾಮಿಗಳನ್ನು ಶೂಟ್ ಮಾಡಿ.

ಇಬ್ಬರು ಉಗ್ರಗಾಮಿಗಳನ್ನು ಕೊಂದ ವೀರಯೋಧನ ಸಾಹಸಗಾಥೆ

✒️ ರಫೀಕ್ ಮಾಸ್ಟರ್

ಉಗ್ರಗಾಮಿಗಳ ಮೇಲೆ ಗುಂಡಿನ ಸುರಿಮಳೆಗೈದು ಅವರನ್ನು ಕೊಂದು ಭುಜದ ಮೇಲೆ ಹಾಕಿಕೊಂಡು ಬರುವ ಫಿಲ್ಮ್ ಹೀರೋಗೆ ಚಪ್ಪಾಳೆ ತಟ್ಟುತ್ತೇವೆ. ಶಿಳ್ಳು ಹಾಕುತ್ತೇವೆ. ಸೆಲ್ಯೂಟ್ ಹೊಡೆಯುತ್ತೇವೆ. ಅವರ ಅಭಿಮಾನಿಗಳಾಗುತ್ತೇವೆ. ಅವರು ಪರದೆಯ ಮುಂದೆ ನಟನೆ ಮಾಡುವ ರೀಲ್ ಹೀರೋಗಳು.

ಆದರೆ ದೇಶದ ಗಡಿಯಲ್ಲಿ, ಕೊರೆಯುವ ಚಳಿಯಲ್ಲಿ, ಗುಂಡಿನ ಸುಳಿ ಮಳೆಯನ್ನು ಲೆಕ್ಕಿಸದೆ, ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಉಗ್ರಗಾಮಿಗಳನ್ನು, ಶತ್ರುಗಳನ್ನು ಕೊಲ್ಲುವವರು ರಿಯಲ್ ಹೀರೋಗಳು.

ಇಬ್ಬರು ಉಗ್ರಗಾಮಿಗಳನ್ನು ಕೊಂದ ಕಾರ್ಯಾಚರಣೆಯ ತಂಡದ ಸದಸ್ಯ, ಒಬ್ಬ ರಿಯಲ್ ಹೀರೋ ನನ್ನು ಪರಿಚಯಿಸಲು ಅಭಿಮಾನ ಪಡುತ್ತೇನೆ.

ಅವರೇ ಕಡಬ ತಾಲೂಕಿನ ಆತೂರು ಸಮೀಪದ ಝುಬೇರ್ ನೇರೆಂಕಿ. ದೇಶದ ಗಡಿ ಕಾಯುವ ಸಿಆರ್ ಪಿಎಫ್ ಯೋಧ. ನಮ್ಮ ಮಕ್ಕಳು ಮೊಬೈಲ್ ಪರದೆಯ ಮುಂದೆ ಶೂಟಿಂಗ್ ಗೇಮ್ ನಲ್ಲಿ ಗುಂಡಿನ ಸುರಿಮಳೆಗೈದು ಮಜಾ ಮಾಡುತ್ತಿದ್ದರೆ, ಝುಬೇರ್ ದೇಶದ ಗಡಿಯಲ್ಲಿ ನಿಜವಾದ ಗನ್ ಹಿಡಿದುಕೊಂಡು ಶತ್ರುಗಳ ಮೇಲೆ ಗುಂಡು ಹಾರಿಸಿ ದೇಶ ರಕ್ಷಣೆ ಮಾಡುತ್ತಿದ್ದಾರೆ.

ಅದೊಂದು ದಿನ ಶ್ರೀನಗರದಲ್ಲಿ -5 ಡಿಗ್ರಿ ಕೊರೆಯುವ ಚಳಿ. ಭಾರತೀಯ ಯೋಧರ ಮೇಲೆ ಆಕ್ರಮಣಮಾಡಲು LeT ಉಗ್ರರಿಬ್ಬರು ಖಾಲಿ ಕಟ್ಟಡವೊಂದಕ್ಕೆ ಪ್ರವೇಶಿಸಿದ್ದರು. ನಿರಂತರ ಮೂವತ್ತೆರಡು ಗಂಟೆಗಳ ಕಾಲ ಗುಂಡಿನ ಹೋರಾಟ ನಡೆಯಿತು. ಇಬ್ಬರು ಉಗ್ರರನ್ನು ಸದೆ ಬಡಿದು ಕೊಂದು ಹಾಕಲಾಯಿತು. ಈ ಕಾರ್ಯಾಚರಣೆಯಲ್ಲಿದ್ದ ಓರ್ವ ಯೋಧ ಜುಬೇರ್ ನೇರೆಂಕಿ ಆದರೆ ದೇಶಕ್ಕಾಗಿ ಶಹೀದ್ ಆದ ಏಕೈಕ ಯೋಧ ಮುಜಾಹಿದ್ ಖಾನ್. ಈ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದ ಜುಬೇರ್ ನೇರೆಂಕಿ ಸಹಿತ 96 ಮಂದಿಗೆ CRPF DJ DISC ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಈ ಸಾಧನೆ ಮಾಧ್ಯಮಗಳ ಮೂಲಕ ಜಗತ್ತಿಗೆ ಪರಿಚಯವಾದ ತಕ್ಷಣವೇ ಝುಬೇರ್ ರಿಯಲ್ ಹೀರೋ ಆದರು.

ಹೀಗೆ ಹೀರೋ ಆದ ಝುಬೇರ್ ಊರಿಗೆ ಬಂದಾಗ ಅವರಿಗೆ ಸಿಕ್ಕಿದ ಸ್ವೀಕಾರ ಅವಿಸ್ಮರಣೀಯ. ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲರೂ ಸೇರಿಕೊಂಡು ಉಪ್ಪಿನಂಗಡಿಯಿಂದ ಸುಮಾರು 15 ಕಿಲೋ ಮೀಟರ್ ದೂರದ ಅವರ ಊರಿನ ತನಕ ತೆರೆದ ವಾಹನದಲ್ಲಿ ಊರಿನ ಹೀರೋಗೆ ಭವ್ಯವಾದ ಸ್ವಾಗತ ನೀಡಲಾಯಿತು. ಎಲ್ಲರಿಂದಲೂ ಪ್ರಶಂಸೆಯ ಮಹಾಪೂರವೇ ಹರಿದುಬಂತು. ಝುಬೇರ್ ರ ಸಾಧನೆಯನ್ನು ಕಂಡು ಅವರಂತೆ ನಾವು ಸೈನಿಕನಾಗಿ ದೇಶ ಸೇವೆ ಮಾಡಬೇಕು ಎಂಬ ಸ್ಫೂರ್ತಿ ಬಹಳಷ್ಟು ಯುವಕರಿಗೆ ಬಂತು.

ನಮ್ಮವರ ಪ್ರತಿಭೆ ಎಲ್ಲಿ ಮಾಯವಾಗಿದೆ?

ನಮ್ಮ ಮಕ್ಕಳು ಮಂಗನಂತೆ ಹಾರಬಲ್ಲರು. ಚಿರತೆಯಂತೆ ಓಡಬಲ್ಲರು. ಮೀನಿನಂತೆ ಈಜಬಲ್ಲರು. ಹದ್ದಿನಂತೆ ಹಿಡಿಯಬಲ್ಲರು. ನೇತ್ರಾವತಿ ನದಿ ಉಕ್ಕಿ ಹರಿಯುತ್ತಿರುವ ಸಂದರ್ಭದಲ್ಲೂ ಪ್ರವಾಹವನ್ನು ಲೆಕ್ಕಿಸದೆ ಜೀವ ರಕ್ಷಣೆಗಾಗಿ ಸೇತುವೆಯ ಮೇಲಿನಿಂದ ಹಾರುವ ಗೂಡಿನಬಳಿಯ ಯುವಕರೇ ಸಾಕ್ಷಿ. ನಮ್ಮ ಮಕ್ಕಳು ವೀರ ಸಾಹಸಿಗರು.ನಮ್ಮ ಮಕ್ಕಳಲ್ಲಿ ಕೆಚ್ಚೆದೆ ಇದೆ. ಉತ್ಸಾಹ, ಪ್ರತಿಭೆ, ಎಲ್ಲವೂ ಇದೆ. ಆದರೆ ಅವೆಲ್ಲಾ ಕ್ರಿಕೆಟ್, ಮೊಬೈಲ್, ಲವ್, ಗಾಂಜಾ, ಜಾಲಿ ರೈಡ್, ಹೊಡೆದಾಟ ಮೊದಲಾದವುಗಳಲ್ಲಿ ಕರಗಿ ಹೋಗುತ್ತಿವೆ. ಪ್ರತಿಭೆಗಳು ಬಾಡುತ್ತಿವೆ. ಏಕಾಗ್ರತೆ ಕುಂದುತ್ತಿದೆ. ಶಕ್ತಿ ಸಾಮರ್ಥ್ಯ ನಶಿಸುತ್ತಿದೆ. ದೇಶಕ್ಕೆ, ಸಮಾಜಕ್ಕೆ ಮತ್ತು ಸಮುದಾಯಕ್ಕೆ ಆಸ್ತಿಯಾಗಬೇಕಾದ ನಮ್ಮ ಮಕ್ಕಳು ಮಾರ್ಗದರ್ಶನದ ಕೊರತೆಯಿಂದ ಮಾರಕವಾಗುತ್ತಿದ್ದಾರೆ. ಮನೆಗೆ ಬೆಳಕಾಗಬೇಕಾದವರು ಮನೆಯವರನ್ನು ಕತ್ತಲಲ್ಲಿ ನಿಲ್ಲಿಸುತ್ತಿದ್ದಾರೆ. ತಲೆಯೆತ್ತಿ ನಡೆಯಬೇಕಾದ ಹೆತ್ತವರನ್ನು ತಲೆತಗ್ಗಿಸುವಂತೆ ಮಾಡುತ್ತಿದ್ದಾರೆ.

ಮೊಬೈಲ್ ಗೇಮ್ ಭವಿಷ್ಯಕ್ಕೆ ಮಾರಕ

ಮೊಬೈಲ್ ಪರದೆಯ ಮುಂದೆ ನಾನಾ ಬಗೆಯ ಗೇಮ್ ನಲ್ಲಿ ಶೂಟ್ ಮಾಡಿ ಮಜಾ ಮಾಡುವುದು ತುಂಬಾ ಸುಲಭ. ಅದರಿಂದ ತಮ್ಮ ಮನಸ್ಸಿಗೆ ಕ್ಷಣಿಕ ಸುಖ ಸಿಗಬಹುದು. ಆದರೆ ದೀರ್ಘ ಕಾಲಿಕ ಕೆಟ್ಟ ಪರಿಣಾಮವನ್ನು ಬೀರಬಲ್ಲದು. ನೀವು ಮೊಬೈಲಿಗೆ ದಾಸರಾಗಿ, ನಿಮ್ಮ ಸಾಧನೆಗಳು ನಷ್ಟವಾಗಿ, ನಿಮ್ಮ ಪ್ರತಿಭೆಗಳು ಕಮರಿ ಹೋಗಿ, ನೀವು ನಿಮ್ಮನ್ನೇ ಇಷ್ಟಪಡದ ಹಂತಕ್ಕೆ ಬರುವ ಅಪಾಯವಿದೆ.

ಯುವಕರೇ, ನಾವೇನು ಮಾಡಬೇಕು?

ಝುಬೇರ್ ರಂತೆ ನಾವು ದೇಶ ಕಾಯುವ ಸೈನಿಕರಾಗಬೇಕು. ಭಾರತೀಯ ಸೇನೆಗೆ ಸೇರಬೇಕು. ಇಂಡಿಯನ್ ಆರ್ಮಿ, ನೇವಿ ಮತ್ತು ಏರ್ ಫೋರ್ಸ್ ನಲ್ಲಿ ನಾವಿರಬೇಕು. ನಮ್ಮ ಹಾರುವ, ಜಿಗಿಯುವ, ಓಡುವ, ಹೊಡೆದಾಡುವ, ಬಡಿದಾಡುವ, ಗುರಿಯಿಡುವ ಎಲ್ಲಾ ಸಾಮರ್ಥ್ಯಗಳನ್ನು ಗಡಿಯಲ್ಲಿ ಶತ್ರುಗಳಿಗೆ ತೋರಿಸಿ ನಮ್ಮ ದೇಶದ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಬೇಕು. ಇದಕ್ಕಾಗಿ ನಾವು ನಮ್ಮನ್ನು ತಯಾರುಗೊಳಿಸಬೇಕು.

  • ನಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಪ್ರತಿ ದಿನ ಓಡುವುದು, ಹಾರುವುದು,ವ್ಯಾಯಾಮ ಮಾಡುವುದು ಹೀಗೆ ಸೇನೆಗೆ ಸೇರಲು ಬೇಕಾದ ಎಲ್ಲ ದೈಹಿಕ ಸಾಮರ್ಥ್ಯವನ್ನು ಹೊಂದಬೇಕು.
  • ಸೇನೆಯ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ಓದಿ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಬೇಕು. ನಿರಂತರ ಓದಿನ ಮೂಲಕ NDA (National defence academy)ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ನಾವು ಸಿದ್ಧರಾಗಬೇಕು.

ನೆನಪಿರಲಿ

ನಿಮ್ಮ ತಾಕತ್ತು, ನಿಮ್ಮ ಪವರ್ ಅಂದರೆ

ಮೊಬೈಲ್ ಪರದೆಯ ಮುಂದೆ ಶೂಟಿಂಗ್ ಗೇಮ್ ನಲ್ಲಿ ಶೂಟ್ ಮಾಡಿ ಗೆಲ್ಲುವುದಲ್ಲ.
ರಸ್ತೆ ಬದಿಯಲ್ಲಿ ಪುಂಡಪೋಕರಿಗಳಂತೆ ಹೊಡೆದಾಟ, ಬಡಿದಾಟ ಮಾಡುವುದಲ್ಲ. ಕೊಲೆ, ಸುಲಿಗೆ ಮಾಡುವುದಲ್ಲ.

ತಾಕತ್ತಿದ್ದರೆ ಝುಬೇರ್ ಅವರಂತೆ ಉಗ್ರಗಾಮಿಗಳನ್ನು ಕೊಂದು ಹಾಕಿ.
ಅವರಂತೆ ಗನ್ ಹಿಡ್ಕೊಂಡು ಶತ್ರುಗಳನ್ನು ಮಟ್ಟ ಹಾಕಿ.

ಇಲ್ಲಿ ಹೊಡೆದಾಡಿದರೆ ನೀವು ರೌಡಿಗಳಾಗುತ್ತೀರಾ!
ಗಡಿಯಲ್ಲಿ ಹೊಡೆದಾಡಿದರೆ ನೀವು ಹೀರೋಗಳಾಗುತ್ತೀರಾ!!
ಏನಾಗಬೇಕು?
ಆಯ್ಕೆ ನಿಮ್ಮದು.

LEAVE A REPLY

Please enter your comment!
Please enter your name here