ದ.ಕ ಜಿಲ್ಲೆಯಾದ್ಯಂತ 6 ಕೇಂದ್ರಗಳಲ್ಲಿ ಕೊರೊನಾ ನಿಯಂತ್ರಣ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

ದ.ಕ ಜಿಲ್ಲೆಯಾದ್ಯಂತ 6 ಕೇಂದ್ರಗಳಲ್ಲಿ ಕೊರೊನಾ ನಿಯಂತ್ರಣ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಚಾಲನೆ ನೀಡಿದರು.

ಕಾರ್ಯಕ್ರಮವು ಸರ್ಕಾರಿ ವೆನ್ಲಾಕ್‌‌ ಆಸ್ಪತ್ರೆಯ ಆಯುಷ್‌‌‌ ವಿಭಾಗದಲ್ಲಿ ನಡೆಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಶಾಸಕ ವೇದವ್ಯಾಸ ಕಾಮತ್ ಸೇರಿ ಇತರರು ಉಪಸ್ಥಿತರಿದ್ದರು.

ದ.ಕ ಜಿಲ್ಲೆಗೆ 24,000 ಡೋಸ್‌ ಕೊರೊನಾ ಲಸಿಕೆ ವಿತರಣೆಯಾಗಿದ್ದು, ಜಿಲ್ಲೆಯ 6 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 52,381 ಗುರುತಿಸಲಾದ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ. ದ.ಕ ಜಿಲ್ಲಾ ವೆನ್ಲಾಕ್‌‌ ಆಸ್ಪತ್ರೆ ಮಂಗಳೂರು ಆಯುಷ್‌ ವಿಭಾಗ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್‌‌, ತಾಲೂಕು ಆಸ್ಪತ್ರೆ ಬಂಟ್ವಾಳ, ತಾಲೂಕು ಆಸ್ಪತ್ರೆ ಬೆಳ್ತಂಗಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಪುತ್ತೂರು, ತಾಲೂಕು ಆಸ್ಪತ್ರೆ ಸುಳ್ಯದಲ್ಲಿ ಈ ಲಸಿಕೆ ನೀಡಲಾಗುತ್ತದೆ.

ಒಂದು ಲಸಿಕಾ ಶಿಬಿರದಲ್ಲಿಒಂದು ದಿನಕ್ಕೆ ನೂರು ಮಂದಿ ಫಲಾನುಭವಿಗಳಿಗೆ ಮಾತ್ರ ಲಸಿಕೆ ವಿತರಣೆಯಾಗಲಿದ್ದು, ಲಸಿಕಾ ಶಿಬಿರವು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಫಲಾನುಭವಿಗಳಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುವುದು. ಶಿಬಿರದಲ್ಲಿ ಲಸಿಕೆಗೆ ಯಾವುದೇ ಫಲಾನುಭವಿಗಳಿಗೆ ನೋಂದಣಿ ಇರುವುದಿಲ್ಲ. ಈಗಾಗಲೇ ನೋಂದಣಿಯಾಗಿರುವ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ನೀಡಲಾಗುವುದು.

ಕೊರೊನಾ ವ್ಯಾಕ್ಸಿನೇಷನ್‌ ಆದ ಬಳಿಕ 30 ನಿಮಿಷಗಳ ಕಾಲ ಪ್ರತಿಯೋರ್ವ ಫಲಾನುಭವಿಯೂ ವಿಶ್ರಾಂತಿ ಪಡೆದುಕೊಳ್ಳಬೇಕು. ಆರೋಗ್ಯ ಕಾರ್ಯಕರ್ತರ ನಿಗಾವಣೆಯಲ್ಲಿ ಕಡ್ಡಾಯವಾಗಿ ವಿಶ್ರಾಂತಿ ಪಡೆದುಕೊಳ್ಳಬೇಕು. ಲಸಿಕೆಯ ಬಳಿಕ ಒಂದುವೇಳೆ ಅಡ್ಡ ಪರಿಣಾಮ ಕಾಣಿಸಿಕೊಂಡಲ್ಲಿ ವೈದ್ಯಕೀಯ ತಂಡದ ಮೂಲಕ ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿರುತ್ತದೆ. ಒಟ್ಟು 89 ಸರಕಾರಿ ಹಾಗೂ 17 ಖಾಸಗಿ ಸಂಸ್ಥೆಗಳನ್ನು ಲಸಿಕೆ ನೀಡಲು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here