ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಚಕ 3 ವಿಕೆಟ್ ಜಯ ದಾಖಲಿಸಿರುವ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಜಯ ಗಳಿಸಿದೆ. ಆಸೀಸ್ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಅಗ್ರ ಸ್ಥಾನಕ್ಕೇರಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಗೆಲುವು ವಿರಾಟ್ ಕೊಹ್ಲಿ ಪಡೆಗೆ 430 ಪಾಯಿಂಟ್ಸ್ಗಳನ್ನು ನೀಡಿದೆ. ದ್ವಿತೀಯ ಸ್ಥಾನದಲ್ಲಿ ನ್ಯೂಜಿಲೆಂಡ್ (420 ಪಾಯಿಂಟ್ಸ್) ಮತ್ತು ತೃತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ (332) ತಂಡಗಳಿವೆ.
‘ಗಬ್ಬಾ ಸ್ಟೇಡಿಯಂನಲ್ಲಿ ವೀರೋಚಿತ ಗೆಲುವಿನ ಬಳಿಕ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನಂ.1 ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ತಂಡ 3ನೇ ಸ್ಥಾನಕ್ಕೆ ಕುಸಿದಿದೆ,’ ಎಂದು ಐಸಿಸಿ ಟ್ವೀಟ್ ಮಾಡಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಮತ್ತು ಐದನೇ ಸ್ಥಾನಗಳಲ್ಲಿ ಕ್ರಮವಾಗಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ತಂಡ ಈವರಗೆ (ಅಂದರೆ 2019ರಿಂದ) 5 ಟೆಸ್ಟ್ ಸರಣಿಗಳನ್ನಾಡಿದೆ. ಇದರಲ್ಲಿ 9 ಪಂದ್ಯಗಳನ್ನು ಗೆದ್ದಿದೆ, 3ರಲ್ಲಿ ಸೋತಿದೆ, 1 ಪಂದ್ಯ ಡ್ರಾ ಮಾಡಿಕೊಂಡಿದೆ. ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ದ್ವಿತೀಯ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ.