ಕರ್ನಾಟಕ

ಆನಂದ್ ಸಿಂಗ್ ಅವರ ಬಳಿ ಮಾತನಾಡುತ್ತೇನೆ, ಅಂತಿಮವಾಗಿ ಎಲ್ಲ ಸರಿ ಹೋಗುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಚಿವ ಆನಂದ್ ಸಿಂಗ್ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಅವರು ತಮ್ಮ ಅಸಮಾಧಾನ, ನೋವನ್ನು ತೋಡಿಕೊಂಡಿದ್ದಾರೆ. ಅವರ ಜೊತೆ ನಾನು ಕೂಡ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ, ಬೆಂಗಳೂರಿಗೆ ಬಂದ ಮೇಲೆ ಮಾತನಾಡಿ ಎಲ್ಲವನ್ನೂ ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಮೂಲಕ ಸಚಿವ ಆನಂದ್ ಸಿಂಗ್ ಅವರಿಗೆ ತೀವ್ರ ಅಸಮಾಧಾನವಿದೆ, ಆರಂಭದಲ್ಲಿಯೇ ಅವರು ಎತ್ತಿರುವ ಖಾತೆ ಕ್ಯಾತೆ ಮುಂದುವರಿದಿದ್ದು, ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಿಎಂ ಬೊಮ್ಮಾಯಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಂದು ತಮ್ಮ ನಿವಾಸದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರನ್ನು ಕರೆದು ಮಾತನಾಡುತ್ತೇನೆ,ಈಗಾಗಲೇ ಎಲ್ಲಾ ವಿಚಾರಗಳನ್ನು ಅವರು ಹೇಳಿದ್ದಾರೆ. ಅಂತಿಮವಾಗಿ ಎಲ್ಲವೂ ಬಗೆಹರಿಯಲಿದೆ ಎಂದು ಸಮಸ್ಯೆಯನ್ನು ತಾವು ಸರಿಪಡಿಸುವ ವಿಶ್ವಾಸ ಹೊಂದಿದ್ದಾರೆ.

ಆನಂದ್ ಸಿಂಗ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆಯೇ ಎಂದು ಕೇಳಿದ್ದಕ್ಕೆ, ಇಲ್ಲ ಹಾಗೇನು ಆಗಿಲ್ಲ, ನಾನು ಈಗ ಏನೂ ಹೇಳಲು ಬರುವುದಿಲ್ಲ, ನಾನು-ನೀವು ಆನಂದ್ ಸಿಂಗ್ ಅಲ್ಲವಲ್ಲ, ಸುಮ್ಮನೆ ಊಹಾಪೋಹ ಬೇಡ ಎಂದರು.

ಆನಂದ್ ಸಿಂಗ್ ಶಮನವ್ನು ತಣಿಸಲು ಸಿಎಂ ಸತತ ಪ್ರಯತ್ನ ಮಾಡುತ್ತಿದ್ದು ನಿನ್ನೆ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಬಾರಿ ಫೋನ್ ನಲ್ಲಿ ಸಂಪರ್ಕಿಸಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Related Articles

Back to top button