ಕರ್ನಾಟಕ

ಆನಂದ್ ಸಿಂಗ್ ಕೊಡುಗೆ ಮಹತ್ವದ್ದು, ಅವರಿಗೆ ನೋವಾಗಿದೆ: ರೇಣುಕಾಚಾರ್ಯ

ನವದೆಹಲಿ: ಸಚಿವ ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತರಾಗಿದ್ದು, ರಾಜೀನಾಮೆ ನಿರ್ಧಾರ ಬೇಡವೆಂದು ಅವರಿಗೆ ಮನವಿ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನವಾಗುವಲ್ಲಿ ಆನಂದ್ ಸಿಂಗ್ ಕೊಡುಗೆ ಮಹತ್ವದ್ದಾಗಿದೆ. ನಾನು ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ. ಅವರಿಗೆ ಒಳ್ಳೆಯ ಖಾತೆ ಸಿಗದಿರುವುದಕ್ಕೆ ಮೊದಲೂ ನೋವು ಇತ್ತು. ಈಗಲೂ ಅದೇ ವಿಚಾರವಾಗಿ ಅವರಿಗೆ ನೋವಾಗಿದೆ. ಪಕ್ಷದ ನಾಯಕರು ಆನಂದ್ ಸಿಂಗ್ ಅವರನ್ನು ಸಮಾಧಾನ ಪಡಿಸುತ್ತಾರೆ. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಪಕ್ಷದ ವರಿಷ್ಠರು ಅವರನ್ನು ಸಮಾಧಾನಪಡಿಸುತ್ತಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ನನ್ನ ಜೀವನದಲ್ಲಿ ನಿರಾಸೆಯ ಪ್ರಶ್ನೆಯೇ ಇಲ್ಲವೆಂದು ರೇಣುಕಾಚಾರ್ಯ ಹೇಳಿದ್ದಾರೆ. ನಾನು ಹೋರಾಟದ ಮೂಲಕವೇ ಬೆಳೆದು ಬಂದಿದ್ದೇನೆ. ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಜನರಿಗೆ ನಿರಾಸೆಯಾಗಿದೆ. ಸಚಿವನಾಗಿಲ್ಲವೆಂದು ನನಗೆ ಬೇಸರವಿಲ್ಲ. ನಾನು ಆಶಾವಾದಿಯಾಗಿದ್ದೇನೆ. ಕ್ಷೇತ್ರದ ಜನರು ಸಚಿವ ಸ್ಥಾನ ಸಿಗದಿರುವುದಕ್ಕೆ ಹೋರಾಟ ಮಾಡುವುದಾಗಿ ಹೇಳಿದ್ದರು. ಆದರೆ, ನಾನು ಆ ರೀತಿ ಮಾಡದಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

Related Articles

Back to top button