
ಅವೈಜ್ಞಾನಿಕ ಹಂಪ್ಸ್ ; ನಡೆದಿದೆ ಅಪಘಾತಗಳ ಸರಮಾಲೆ.! ಉಳಾಯಿಬೆಟ್ಟು ಪಂಚಾಯತ್ ಗೆ ಇನ್ನೆಷ್ಟು ಬಲಿ ಬೇಕು.?
ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಮಂಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯ ಅಪಾಯಕಾರಿ ಹಂಪ್ಸ್ ಮರಣದ ಹಂಪ್ಸ್ ಆಗಿ ಪರಿವರ್ತನೆಗೊಂಡಿದೆ. ಇದು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಯಾಗಿದ್ದು, ಇಲ್ಲಿಯೇ ಬಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಈ ಹಿಂದೆ ಈ ಪ್ರದೇಶದಲ್ಲಿ ಬೈಕು ಸವಾರರ ಮಧ್ಯೆ ಅಪಘಾತವುಂಟಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಆ ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರು ಸ್ಥಳೀಯ ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಗೆ ಮನವಿ ನೀಡಿ ಇಲ್ಲಿ ವಾಹನ ಸವಾರರ ವೇಗಕ್ಕೆ ಮಿತಿ ಹಾಕಲು ಹಂಪ್ಸ್ ನಿರ್ಮಾಣ ಮಾಡುವಂತೆ ಕೋರಿಕೊಂಡಿದ್ದರು.
ಇದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯತ್ ಅಲ್ಲಿ ಹಂಪ್ಸ್ ವೊಂದನ್ನು ನಿರ್ಮಿಸಿದ್ದು, ಇವರ ಉದ್ದೇಶ ಅಪಘಾತ ನಿಯಂತ್ರಿಸುವುದಾಗಿತ್ತು. ಆದರೆ ವಿಚಿತ್ರ ಎಂಬಂತೆ ಹಂಪ್ಸ್ ನಿರ್ಮಾಣದ ನಂತರ ಇಲ್ಲಿ ಅಪಘಾತಗಳ ಸಂಖ್ಯೆ ವಿಪರೀತ ಹೆಚ್ಚಿದ್ದು, ವಾಹನ ಸವಾರರು ಭಯದಿಂದಲೇ ವಾಹನ ಚಲಾಯಿಸುವಂತಾಗಿದೆ. ಇದಕ್ಕೆ ಕಾರಣ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಂಪ್ಸ್ ಆಗಿರುತ್ತದೆ. ರಸ್ತೆಯಲ್ಲಿ ಎತ್ತರದ ಗೋರಿ ಕಟ್ಟುವಂತೆ ಹಂಪ್ಸ್ ಅನ್ನು ಇಲ್ಲಿ ನಿರ್ಮಾಣ ಮಾಡಿರುವುದು, ವಾಹನ ಸವಾರರಿಗೆ ಗೊತ್ತಾಗುವಂತೆ ಪೈಂಟ್ ಕೂಡ ಸರಿಯಾಗಿ ಬಳಿದಿಲ್ಲ. ಮುಂಜಾಗ್ರತಾ ಕ್ರಮವಿಲ್ಲ. ರಸ್ತೆಯ ಆಸುಪಾಸು ಹಂಪ್ಸ್ ಇರುವ ಬಗ್ಗೆ ಸೂಚನಾ ಬೋರ್ಡ್ ಅನ್ನು ಅಳವಡಿಸಿಲ್ಲ. ರಸ್ತೆ ಅಪಘಾತ ನಿಯಂತ್ರಿಸಲು ಹಾಕಿದ ಹಂಪ್ಸ್ ನಿಂದಾಗಿಯೇ ಇಲ್ಲಿ ಅಪಘಾತಗಳ ಸರಮಾಲೆ ಹೆಚ್ಚುತ್ತಿದೆ.
ಇತ್ತೀಚೆಗೆ ನಾಲ್ಕರಿಂದ ಐದು ಅಪಘಾತ ಪ್ರಕರಣಗಳು ಬೇಜವಾಬ್ದಾರಿ ಹಂಪ್ಸ್ ನಿರ್ಮಾಣದಿಂದಲೇ ನಡೆದಿತ್ತು, ಅಪಘಾತದಿಂದ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ ಉದಾಹರಣೆ ಇದೆ. ನಾಲ್ಕು ದಿನಗಳ ಹಿಂದೆಯಷ್ಟೇ ಇಫ್ತಾರ್ ಗಾಗಿ ಸಂಬಂಧಿಕರ ಮನೆಗೆ ಬಂದಿದ್ದ ಗುರುಪುರದ ಮಹಿಳೆಯೊಬ್ಬರು ಕೂಡ ಈ ಹಂಪ್ಸ್ ನಿಂದಾಗಿ ಅಪಘಾತಕ್ಕೀಡಾಗಿ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನಾದರೂ ಲೋಕೋಪಯೋಗಿ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್ ಈ ಅಪಾಯಕಾರಿ, ಅವೈಜ್ಞಾನಿಕ ಹಂಪ್ಸ್ ತೆರವು ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಅಳವಡಿಸಿ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಬೇಕಿದೆ. ಗ್ರಾಮ ಪಂಚಾಯತ್ ಅಳವಡಿಸಿರುವ ಬೇಜವಾಬ್ದಾರಿ ಹಂಪ್ಸ್ ಮರಣದ ಹಂಪ್ಸ್ ಆಗಿ ಪರಿವರ್ತನೆಯಾಗಿದೆ. ಇಲ್ಲಿ ಇನ್ನಷ್ಟು ಜೀವ ಬಲಿಯಾಗುವ ಮುನ್ನ ಲೋಕೋಪಯೋಗಿ ಇಲಾಖೆ, ಗ್ರಾಮ ಪಂಚಾಯತ್ ಎಚ್ಚೆತ್ತುಕೊಂಡು ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ನಿರ್ಮಿಸಿ ವಾಹನ ಸವಾರರ ಜೀವ ಉಳಿಸುವ ಕೆಲಸ ಮಾಡಲಿ. ಇಲ್ಲದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮವಂತು ಗ್ಯಾರಂಟಿ.
