ಕಾಬೂಲ್ ಅವಳಿ ಸ್ಫೋಟ:60 ಮಂದಿ ಆಫ್ಘಾನಿಸ್ತಾನದ ಪ್ರಜೆಗಳು ಹಾಗೂ 12 ಮಂದಿ ಅಮೆರಿಕ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದು 140 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ವಾಷಿಂಗ್ ಟನ್: ಕಾಬೂಲ್ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು ಉಗ್ರ ದಾಳಿ ಬೆದರಿಕೆ ಇದೆ ಎಂದು ಬ್ರಿಟನ್ ಹೇಳಿಕೆ ಬೆನ್ನಲ್ಲೇ ವಿಮಾನ ನಿಲ್ದಾಣದ ಸಂಕೀರ್ಣದಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣದಲ್ಲಿ 60 ಮಂದಿ ಆಫ್ಘಾನಿಸ್ತಾನದ ಪ್ರಜೆಗಳು ಹಾಗೂ 12 ಮಂದಿ ಅಮೆರಿಕ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದು 140 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹಲವು ಮೂಲಗಳ ಪ್ರಕಾರ ಈ ಮಾಹಿತಿ ಲಭ್ಯವಾಗಿದ್ದು, ಅಮೆರಿಕ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಕೊನೆಯ ಹಂತದಲ್ಲಿ ಈ ಸ್ಫೋಟ ಸಂಭವಿಸಿದ್ದು, ಕಾಬೂಲ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಭದ್ರತಾ ಅಲರ್ಟ್ ನ್ನು ಘೋಷಿಸಿದೆ.
11 ನೌಕಾಪಡೆ ಸಿಬ್ಬಂದಿ ಹಾಗೂ ಓರ್ವ ನೌಕಾಪಡೆ ವೈದ್ಯರು ಸಾವನ್ನಪ್ಪಿದ್ದು, 12 ಮಂದಿ ಸೇವಾ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ಊಹಿಸಲಾಗುತ್ತಿದೆ.
ಅಫ್ಘಾನಿಸ್ತಾನದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ 140 ಕ್ಕೂ ಹೆಚ್ಚು ಅಫ್ಘಾನಿಸ್ತಾನದ ಮಂದಿ ತೀವ್ರವಾಗಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಅಬ್ಬೆ ಗೇಟ್ ಬಳಿ ಮೊದಲ ಸ್ಫೋಟ ಸಂಭವಿಸಿದರೆ ಎರಡನೇ ಸ್ಫೋಟ ಮೊದಲ ಸ್ಫೋಟ ಸಂಭವಿಸಿದ ಸ್ಥಳಕ್ಕಿಂತ ಹೆಚ್ಚು ದೂರ ಇರದ ಬರಾನ್ ಹೊಟೇಲ್ ನಲ್ಲಿ ಸಂಭವಿಸಿದೆ.
ಸ್ಫೋಟದ ಜೊತೆಗೆ ಗುಂಡಿನ ಮೊರೆತವೂ ಕೇಳಿಬಂದಿದ್ದು, ಈ ಕ್ಷಣದಲ್ಲಿ ಅಮೆರಿಕ ನಾಗರಿಕರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವುದು ಹಾಗೂ ವಿಮಾನ ನಿಲ್ದಾಣದ ಗೇತ್ ಗಳತ್ತ ಬರುವುದನ್ನು ತಪ್ಪಿಸಬೇಕಿದೆ, ಈ ಪ್ರದೇಶದಲ್ಲಿರುವ ಅಮೆರಿಕ ನಾಗರಿಕರು ಈಸ್ಟ್ ಗೇಟ್ ಅಥವಾ ನಾರ್ತ್ ಗೇಟ್ ಬಳಿ ಇರುವವರು ತಕ್ಷಣವೇ ಅಲ್ಲಿಂದ ಹೊರಡಬೇಕಿದೆ ಎಂದು ಅಮೆರಿಕ ರಾಯಭಾರಿ ಕಚೇರಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟದ ಘಟನೆ ಹಿನ್ನೆಲೆಯಲ್ಲಿ, ಇತ್ತ ವಾಷಿಂಗ್ ಟಾನ್ ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಮ್ಮ ಆಡಳಿತದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಎನ್‌ಎಸ್ ತಂಡ, ರಕ್ಷಣಾ ಸಚಿವರು ಸೇರಿ ಪ್ರಮುಖ ಸಚಿವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಸ್ಫೋಟಕ್ಕೆ ಐಎಸ್‌ಐಎಸ್ ಆತ್ಮಾಹುತಿ ಬಾಂಬರ್ ಗಳು ಕಾರಣ ಎನ್ನಲಾಗುತ್ತಿದ್ದು ತಾಲೀಬಾನ್ ಸಹ ನಾಗರಿಕರೆಡೆಗೆ ಬಾಂಬ್ ದಾಳಿ ನಡೆದಿರುವುದನ್ನು ಖಂಡಿಸಿದೆ.!!
“ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಾಗರಿಕರ ಮೇಲೆ ಬಾಂಬ್ ದಾಳಿ ನಡೆದಿರುವುದನ್ನು ಇಸ್ಲಾಮಿಕ್ ಎಮಿರೈಟ್ ಖಂಡಿಸುತ್ತದೆ” ಎಂದು ತಾಲಿಬಾನ್ ಹೇಳಿಕೆ ಬಿಡುಗಡೆ ಮಾಡಿದೆ.