ಉಳ್ಳಾಲ

ತೊಕ್ಕೊಟ್ಟು ಫ್ಲೈ ಓವರಲ್ಲಿ ರಸ್ತೆ ಅಪಘಾತ ; ಮೇಲ್ಸೇತುವೆಯಿಂದ ಎಸೆಯಲ್ಪಟ್ಟ ಬುಲೆಟ್ ಸವಾರ ದಾರುಣ ಸಾವು !

ಉಳ್ಳಾಲ, ಅ.27: ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಸ್ತೆಗೆಸೆಯಲ್ಪಟ್ಟ ಬುಲೆಟ್ ಸವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ. ಕುಂಪಲ ಸರಳಾಯ ಕಾಲನಿ ನಿವಾಸಿ ಸುಬ್ರಹ್ಮಣ್ಯ ರಾವ್ ಸಿಂಧ್ಯ(45) ಮೃತ ದುರ್ದೈವಿ.

ಇಂದು ಸಂಜೆ ಸುಬ್ರಹ್ಮಣ್ಯ ಅವರು ಮಂಗಳೂರಿನಿಂದ ಕುಂಪಲ ಕಡೆಗೆ ತೊಕ್ಕೊಟ್ಟು ಮೇಲ್ಸೇತುವೆ ಮೇಲಿಂದ ಬುಲೆಟಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಮೇಲ್ಸೇತುವೆಯಿಂದ 20 ಅಡಿ ಆಳದ ಸರ್ವಿಸ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಸುಬ್ರಹ್ಮಣ್ಯ ಅವರು ತೊಕ್ಕೊಟ್ಟಿನ ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಅಸುನೀಗಿದ್ದಾರೆ. ಫ್ಲೈ ಓವರಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿರುವುದಾಗಿ ಶಂಕಿಸಲಾಗಿದೆ.

ಆಸ್ಪತ್ರೆಗೆ ಬಂದ ಸುಬ್ರಹ್ಮಣ್ಯ ಅವರ ತಾಯಿ, ಪತ್ನಿ, ಮಗಳು ಮೃತದೇಹದ ಮುಂದೆ ರೋದಿಸುತ್ತಿರುವ ದೃಶ್ಯ ಎಲ್ಲರ ಮನಕಲಕುವಂತಿತ್ತು.
ಸುಬ್ರಹ್ಮಣ್ಯ ಈ ಮೊದಲು ದುಬೈಯಲ್ಲಿದ್ದು ಊರಿಗೆ ಮರಳಿದ ನಂತರ ಮಂಗಳೂರಲ್ಲಿ ಸಿವಿಲ್ ಕನ್ಸಟ್ರಕ್ಷನ್ ಕೆಲಸ ಮಾಡುತ್ತಿದ್ದರು. ಸುಬ್ರಹ್ಮಣ್ಯ ಅವರು ಯುವ ಮರಾಠ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.

Back to top button