ಉಡುಪಿಕರಾವಳಿ

ಮಿತಿ ಮೀರಿ ಟೇಸ್ಟಿಂಗ್ ಪೌಡರ್ ಬಳಸಿದರೆ ಮೊಕದ್ದಮೆ: ಜಿ ಜಗದೀಶ್ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಯಾವುದೇ ಬಗೆಯ ಆಹಾರ ತಯಾರಿಕೆಯಲ್ಲಿ ಮಿತಿ ಮೀರಿದ ಟೇಸ್ಟಿಂಗ್ ಪೌಡರ್ ಬಳಕೆ ಕಂಡು ಬಂದರೆ ಆಹಾರ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಆಹಾರ ಸುರಕ್ಷತೆ ಕುರಿತ ಜಿಲ್ಲಾ ಮಟ್ಟದ ಸಲಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೋಬಿ ಮಂಚೂರಿ, ಚೈನೀಸ್ ತಿನಿಸುಗಳ ತಯಾರಿಕೆಯಲ್ಲಿ ರುಚಿಯ ಹೆಚ್ಚಳಕ್ಕೆ ಟೇಸ್ಟಿಂಗ್ ಪೌಡರ್‌ ಅನ್ನು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ದೂರುಗಳಿವೆ.

ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಟೇಸ್ಟಿಂಗ್ ಪೌಡರ್ ಬಳಸಿದರೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಆಹಾರ ಪದಾರ್ಥಗಳ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ, ನಿಯಮ ಉಲ್ಲಂಘನೆ ಕಂಡುಂಬಂದರೆ ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅನುಮತಿಯಿಲ್ಲದೆ ಅನಧಿಕೃತವಾಗಿ ಟೇಸ್ಟಿ ಪೌಡರ್ ಮಾರಾಟ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬೇಕರಿ ಉತ್ಪನ್ನಗಳ ಗುಣಮಟ್ಟ ಕುರಿತು ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಆಹಾರ ಪದಾರ್ಥಗಳ ಪ್ಯಾಕೇಟ್ ಮೇಲೆ ಬಳಕೆಗೆ ನಿಗದಿತ ದಿನಾಂಕ ನಮೂದಿಸಿರುವ ಕುರಿತು ಪರಿಶೀಲಿಸಬೇಕು. ಜಿಲ್ಲೆಯಾದ್ಯಂತ ಪ್ರತಿ ತಿಂಗಳು ನಿರ್ದಿಷ್ಟ ಸಂಖ್ಯೆಯ ಆಹಾರ ಉತ್ಪನ್ನಗಳ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.

ಹಣ್ಣುಗಳನ್ನು ರಾಸಾಯನಿಕ ಸಿಂಪಡಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಬಾಳೆಕಾಯಿಗಳು ಹಣ್ಣು ಮಾಡಲು ರಾಸಾಯನಿಕಗಳ ಬಳಕೆ ನಡೆಯುತ್ತಿದ್ದರೆ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು. ಬಾಳೆಕಾಯಿ ಮಂಡಿಗಳ ಮೇಲೆ ನಿಗಾ ಇರಸಿಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಎಎಸ್‌ಪಿ ಕುಮಾರಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಇದ್ದರು.

Related Articles

Back to top button