ಕರ್ನಾಟಕ

ಸದಸ್ಯತ್ವ ಅಭಿಯಾನದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಜಮಖಂಡಿಯ ಪೊಲೀಸರನ್ನು ತಕ್ಷಣ ಅಮಾನತ್ತುಗೊಳಿಸಲು ಕ್ಯಾಂಪಸ್ ಫ್ರಂಟ್ ಆಗ್ರಹ

ಬಾಗಲಕೋಟೆ: ಬಾಗಲಕೋಟೆಯ ಜಮಖಂಡಿಯಲ್ಲಿ ದಿನಾಂಕ 17-08-2021 ರಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ವಿದ್ಯಾರ್ಥಿ ನಾಯಕರ, ನ್ಯಾಯವಾದಿಗಳ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸ್ ದೌರ್ಜನ್ಯ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿಯು ಪೊಲೀಸರ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ.

ಜಮಖಂಡಿ ನಗರದಲ್ಲಿ ದಿನಾಂಕ 17-08-2021 ರಂದು ನಡೆದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯತ್ವ ಅಭಿಯಾನದ ಕರ್ನಾಟಕ ರಾಜ್ಯದ ಉಧ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿ ಜಾಥಾ ಹಾಗೂ ಸಭಾ ಕಾರ್ಯಕ್ರಮಕ್ಕೆ ಅನುಮತಿಗೆ ಕೋರಿ ದಿನಾಂಕ : 14-08-2021 ರಂದೇ ಜಮಖಂಡಿ ನಗರ ಪೋಲಿಸ್ ಠಾಣೆಗೆ ಕ್ಯಾಂಪಸ್ ಫ್ರಂಟ್ ಬಾಗಲಕೋಟೆಯ ಜಿಲ್ಲಾ ನಾಯಕರು ಮನವಿ ನೀಡಿದ್ದು, ಆದರೆ ಜಾಥಾಕ್ಕೆ ಅನುಮತಿ ದೊರಕಿರಲಿಲ್ಲ. ಆದ್ದರಿಂದ ಕಾನೂನನ್ನು ಪಾಲಿಸಿಕೊಂಡು ಕ್ಯಾಂಪಸ್ ಫ್ರಂಟ್ ಬಾಗಲಕೋಟೆ ಜಿಲ್ಲಾ ಸಮಿತಿಯು ಜಾಥಾ ನಡೆಸದೆ ಕೇವಲ ಒಳಾಂಗಣದಲ್ಲಿ ಜಮಖಂಡಿಯ ಅಂಬೇಡ್ಕರ್ ಭವನದಲ್ಲಿ ಎಲ್ಲಾ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಸದಸ್ಯತ್ವ ಅಭಿಯಾನದ ಉದ್ಘಾಟನಾ ಸಮಾರಂಭ ನಡೆಸುತ್ತಿರುವಾಗ ಏಕಾ ಏಕಿ ಸಭಾಂಗಣಕ್ಕೆ ನುಗ್ಗಿದ ಜಮಖಂಡಿಯ ಪೋಲಿಸರು ಧಾಂದಲೆ ನಡೆಸಿ ಕ್ಯಾಂಪಸ್ ಫ್ರಂಟ್ ನ ರಾಜ್ಯ ನಾಯಕರು, ವಿದ್ಯಾರ್ಥಿಗಳು ಸೇರಿದಂತೆ ಸ್ಥಳಕ್ಕೆ ಆಗಮಿಸಿದ್ದ ನ್ಯಾಯವಾದಿಗಳ ಮೇಲೂ ಲಾಠಿಯಿಂದ ಹಲ್ಲೆ ನಡೆಸಿ, ಬಂಧಿಸಿ ನಂತರ ಬಿಡುಗಡೆಗೊಳಿಸಿರುತ್ತಾರೆ.

ಜಮಖಂಡಿ ನಗರ ಪೊಲೀಸರಾದ PSI ಗೋವಿಂದ ಗೌಡ ಎಸ್. ಪಾಟೀಲ್, ಪೇದೆಗಳಾದ ಶೇಖರ್ ನಾಯಕ್, ಚೌಹಾಣ್ ಡ್ರೈವರ್ ಮತ್ತು ಇನ್ನಿತರೆ ಪೊಲೀಸರು ಅತೀಯಾಗಿ ದುರ್ವರ್ತನೆ ತೋರಿ, ಯಾವುದೇ ಮಾಸ್ಕ್ ಧರಿಸದೆ ಕೋವಿಡ್ ನಿಯಮಗಳನ್ನು ಪಾಲಿಸದೆ ವಿದ್ಯಾರ್ಥಿಗಳ ಮೈಯನ್ನು ಮುಟ್ಟಿ, ಲಾಠಿಯಿಂದ ಹೊಡೆದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ವಿದ್ಯಾರ್ಥಿ ನಾಯಕರ, ನ್ಯಾಯವಾದಿಗಳ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಬಂಧಿಸಿಕೊಂಡು ಹೋಗಿದ್ದಾರೆ ಮತ್ತು ಸಬಾಂಗಣದಲ್ಲಿ ಉಳಿದ ವಿದ್ಯಾರ್ಥಿಗಳನ್ನು ಸಭಾಂಗಣದ ಒಳಗೆ ಕೂಡಿಟ್ಟು ಬೀಗ ಹಾಕಿ ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ತೊಂದರೆ ನೀಡಿ ಸಭಾಂಗಣದಲ್ಲಿ ಅಲಂಕರಿಸಿದ್ದ ಕ್ಯಾಂಪಸ್ ಫ್ರಂಟ್ ಧ್ವಜಗಳನ್ನು ಕಿತ್ತು ಹಾಕಿಕೊಂಡು, ಕುರ್ಚಿಗಳನ್ನು ಸಹ ಒಡೆದು ಹಾಕಿರುವ ಪೊಲೀಸರ ಈ ನಡೆಯು ಪ್ರಜೆಗಳಿಗೆ ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳ ದಮನವಾಗಿದೆ. ಆದ್ದರಿಂದ ತಪ್ಪಿತಸ್ಥ ಪೋಲಿಸರನ್ನು ತಕ್ಷಣವಾಗಿ ಅಮಾನತ್ತುಗೊಳಿಸಬೇಕೆಂದು ಅಗ್ರಹಿಸುತ್ತೇವೆ.


ಈ ಪೊಲೀಸರ ದೌರ್ಜನ್ಯದ ವಿರುದ್ಧ ನಾವು ಕಾನೂನು ಹೋರಾಟವನ್ನು ಸಹ ನಡೆಸಲಿದ್ದೇವೆ, ಅದಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಅನ್ಯಾಯವನ್ನು ಯಾವ ರೀತಿಯಲ್ಲಿ ಖಂಡಿಸಲು ಅವಕಾಶವಿದೆಯೋ ಅದನ್ನು ನಾವು ಕಾರ್ಯಗತಗೊಳಿಸಲಿದ್ದೇವೆ. ನಾವು ಬದುಕುತ್ತಿರುವುದು ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಕಾನೂನು ಬದ್ಧವಾದ ವ್ಯವಸ್ಥೆಯಲ್ಲಿ ಹೊರತು ಪೊಲೀಸ್ ರಾಜ್ಯದಲ್ಲಿ ಅಲ್ಲ ಎಂಬುದನ್ನು ಇಲ್ಲಿನ ಪೊಲೀಸ್ ಇಲಾಖೆಯು ಮನವರಿಕೆ ಮಾಡಿಕೊಳ್ಳಬೇಕಿದೆ. ನಾವು ಈ ವಿಚಾರವನ್ನು ಸರಳವಾಗಿ ಬಿಡುವುದಿಲ್ಲ, ನ್ಯಾಯಾಲಯದಲ್ಲಿ ಪೊಲೀಸರ ನಡೆಯನ್ನು ಪ್ರಶ್ನಿಸಲಿದ್ದೇವೆ. ಕಾನೂನು ಸಮರಕ್ಕೆ ನಾವು ಸಿದ್ಧವಾಗಿದ್ದೇವೆ. ನಮ್ಮ ಬೇಡಿಕೆಯ ಅನುಗುಣವಾಗಿ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ನ್ಯಾಯ ಒದಗಿಸಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಮೂಹವನ್ನು ಒಗ್ಗೂಡಿಸಿ ಜಮಖಂಡಿ ಚಲೋ ನಡೆಸಲಿದ್ದೇವೆಂದು ಈ ಪತ್ರಿಕಾ ಗೋಷ್ಠಿಯ ಮೂಲಕ ತಿಳಿಸಲು ಬಯಸುತ್ತೇವೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅನೀಸ್ ಕುಂಬ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಲ್ತಾಫ್ ಹೊಸಪೇಟೆ, ಚಿತ್ರದುರ್ಗ ಜಿಲ್ಲಾ ನಾಯಕರಾದ ಅಝರ್ ಚಿತ್ರದುರ್ಗ ಮತ್ತು ಬಾಗಲಕೋಟೆ ಜಿಲ್ಲಾ ನಾಯಕರಾದ ಮುಜೀಬ್ ಬನಹಟ್ಟಿ ಉಪಸ್ಥಿತರಿದ್ದರು.

Related Articles

Back to top button