ಮಂಗಳೂರು : ಭಾರತ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಸಪ್ಟೆಂಬರ್ 27 ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದ್ದು , ಮುಸ್ಲಿಂ ಯೂತ್ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಶ್ರಾರ್ ಗೂಡಿನಬಳಿ ತಿಳಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ, ದಿಲ್ಲಿ ಗಡಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ರೈತ ಚಳುವಳಿ ನಡೆಯುತ್ತಿದೆ ಸೆಪ್ಟೆಂಬರ್ 27 ಕ್ಕೆ ಈ ಮೂರೂ ಕೃಷಿ ಕಾಯ್ದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿ ಒಂದು ವರ್ಷವಾಗುತ್ತದೆ. ಆ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ಗೆ ಕರೆ ಕೊಟ್ಟಿದೆ.”ಈ ಬಂದ್ ಗೆ ಮುಸ್ಲಿಂ ಯೂತ್ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಂಪೂರ್ಣ ಬೆಂಬಲ ನೀಡಲಿದೆ.
ಅನ್ನದಾತನ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ…ಕೃಷಿ ಕ್ಷೇತ್ರಗಳನ್ನು ಕಾರ್ಪೊರೇಟೀಕರಣ ಮಾಡುವ ಮೂಲಕ ಭೀಕರ ದುರಂತಕ್ಕೆ ಕೇಂದ್ರ ಸರ್ಕಾರ ಕಾರಣವಾಗುತ್ತಿದೆ. ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟ ಒಂದು ವರ್ಷದ ಸನಿಹಕ್ಕೆ ಬಂದು ದೇಶದಾದ್ಯಂತ ಹೋರಾಟ ನಡೆಸುತ್ತಿದ್ದರೂ ಸಹ ಅದಕ್ಕೆ ಸ್ಪಂದಿಸದ ಕೇಂದ್ರ ಸರ್ಕಾರವು ತನ್ನ ಮೊಂಡುತನ ಪ್ರದರ್ಶಿಸುತ್ತಿದೆ..ಖಾಲಿಸ್ತಾನಿ, ದೇಶದ್ರೋಹಿ ಪಟ್ಟ ಕಟ್ಟುತ್ತಿದೆ. ಇಲ್ಲಿಯವರೆಗೂ ಸುಮಾರು 600ಕ್ಕೂ ಹೆಚ್ಚು ರೈತರು ಮೃತ ಪಟ್ಟಿದ್ದಾರೆ. ಆದರೂ ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ಮಾಡುತ್ತಿಲ್ಲ. ರೈತರು ಸಹ ಯಾವುದೇ ಸಂಧಾನಕ್ಕೂ ಬಗ್ಗದೇ ಹೋರಾಟ ಗೆಲ್ಲುವವರೆಗೂ ಹಿಂದಿರುಗುವುದಿಲ್ಲ ಎಂದು ಪಣ ತೊಟ್ಟಿದ್ದಾರೆ, ದೇಶದಲ್ಲಿ ಇಂದು ವರ್ತಕರು, ಗ್ರಾಹಕರು, ವಿತರಕರು, ವ್ಯಾಪಾರಿಗಳು ಸೇರಿದಂತೆ ಎಲ್ಲಾ ಕ್ಷೇತ್ರ, ಜನಸಾಮಾನ್ಯರಿಗೆ ಊಹಿಸಲಾಗದಷ್ಟು ಹಾನಿಯುಂಟಾಗಿದೆ. ಈ ಬಿಕ್ಕಟ್ಟನ್ನು ಎದುರಿಸಲು ಜನತೆ ಒಂದಾಗಬೇಕಾಗಿದೆ, ಈ ಬಂದ್ ಯಶಸ್ವಿಗೊಳಿಸಬೇಕಾಗಿದೆ. ಅದಕ್ಕಾಗಿ ನಾವು ಕೈ ಜೋಡಿಸಲಿದ್ದೇವೆ ಎಂದು ಮುಸ್ಲಿಂ ಯೂತ್ ಲೀಗ್ ದ. ಕ ಜಿಲ್ಲಾಧ್ಯಕ್ಷರಾದ ನೌಶಾದ್ ಮಲಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಇಸ್ರಾರ್ ಗೂಡಿನಬಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.