ಬೆಂಗಳೂರು : ಕೊರೋನಾ ಸೋಂಕಿನ ಸಂದರ್ಭದಲ್ಲಿಯೇ ಸೆಪ್ಟೆಂಬರ್ 5, 2021ರಂದು ಆಚರಿಸಲಾಗುತ್ತಿರುವಂತ ಶಿಕ್ಷಕರ ದಿನಾಚರಣೆಗಾಗಿ ರಾಜ್ಯ ಸರ್ಕಾರವೂ ಕೊರೋನಾ ನಿಯಂತ್ರಣ ಕ್ರಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸೂಚಿಸಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುವ ಸಂಭವ ಇರುವ ಹಿನ್ನಲೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷಾ ದೃಷ್ಠಿಯಿಂದ ಸರ್ಕಾರವು ಈ ಸಾಲಿನ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಮತ್ತು ಸುರಕ್ಷಿತವಾಗಿ ಆಚರಿಸಲು ತೀರ್ಮಾನಿಸಿರುವ ಹಿನ್ನಲೆಯಲ್ಲಿ, ಪ್ರಸಕ್ತ ಸಾಲಿನ ಜಿಲ್ಲಾ, ತಾಲೂಕು ಮತ್ತು ಶಾಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ದಿನಾಂಕ 05-09-2021ರ ಭಾನುವಾರದಂದು ಕೆಳಕಂಡಂತೆ ಮಾರ್ಗಸೂಚಿಗಳನ್ನು ಅನುಸರಿಸಿ, ಆಯೋಜಿಸಲು ತಿಳಿಸಿದ್ದಾರೆ.
ಜಿಲ್ಲಾ, ತಾಲೂಕು ಹಾಗೂ ಶಾಲಾ ಮಟ್ಟದ ಸಮಾರಂಭದ ಮಾರ್ಗಸೂಚಿಗಳು
- ಜಿಲ್ಲಾ ಮಟ್ಟದ ವೇದಿಕೆಯ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸತ್ ಸದಸ್ಯರು, ವಿಧಾನಸಭಾ, ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಓ, ಜಿಲ್ಲಾ ಉಪನಿರ್ದೇಶಕರು ಇವರು ಮಾತ್ರ ಆಸೀನರಾಗಿರುವಂತೆ ವೇದಿಕೆ ಸಜ್ಜುಗೊಳಿಸುವುದು.
- ತಾಲೂಕು ಮಟ್ಟದ ವೇದಿಕೆ ಮೇಲೆ ಸ್ಥಳೀಯ ವಿಧಾನಸಭಾ, ಪರಿಷತ್ತಿನ ಸದಸ್ಯರು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ತಾಲೂಕು ಪಂಚಾಯ್ತಿ ಸಿಇಓ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು.
- ಶಾಲಾ ಮಟ್ಟದ ವೇದಿಕೆಯಲ್ಲಿ ಶಾಲಾ ಮುಖ್ಯಸ್ಥರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಮತ್ತು ಎಲ್ಲಾ ಶಿಕ್ಷಕರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸೋ ಮೂಲಕ ಗೌರವ ಸೂಚಿಸುವುದು.
- ವೇದಿಕೆಯ ಮುಂಭಾಗದ 10 ಮಂದಿ ಮೀರದಂತೆ ಆಸೀನರಾಗಿರುವಂತೆ ವ್ಯವಸ್ಥೆ ಮಾಡುವುದು.
- 2ನೇ ಸಾಲಿನಲ್ಲಿ ಎಲ್ಲಾ ಸಂಘಗಳೂ ಸೇರಿದಂತೆ ಗರಿಷ್ಠ 10 ಮಂದಿಗೆ ಮಾತ್ರ ವ್ಯವಸ್ಥೆ ಮಾಡುವುದು
- ಮೂರನೇ ಸಾಲಿನಲ್ಲಿ ಇಲಾಖೆಯ ಮಟ್ಟದ 10ಮಂದಿ ಮೀರದಂತೆ ಅಧಿಕಾರಿಗಳು
- ವೇದಿಕೆಯ ಬಲಭಾಗದಲ್ಲಿ ಮಾಧ್ಯಮದ ಪ್ರತಿನಿಧಿಗಳು
- ವೇದಿಕೆಯ ಎಡಭಾಗದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರು
- ಆಹ್ವಾನ ಪತ್ರಿಕೆಯನ್ನು 50 ಮಂದಿಗೆ ಮೀರದಂತೆ ಮುದ್ರಿಸುವುದು. ಅಸನ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು.
- ರಾಜ್ಯ, ಜಿಲ್ಲಾ, ತಾಲೂಕು ಮತ್ತು ಶಾಲಾ ಮಟ್ಟದಲ್ಲಿ ದಿನಾಂಕ 05-09-2021ರಂದೆ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದು.
- ಸಮಾರಂಭದ ಎಲ್ಲಾ ಹಂತಗಳಲ್ಲಿಯೂ ಸುರಕ್ಷತೆಯನ್ನು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವುದು.
- ಹೂಗುಚ್ಛ, ಹಾರ-ತುರಾಯಿ, ಹಣ್ಣಿನ ಬುಟ್ಟಿ, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದು. ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬೇಕು.
- ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರೂ ಪ್ರವೇಶದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ಗೆ ಒಳಗಾಗುವುದು. ಕೈಗಳಿಗೆ ಸ್ಯಾನಿಟೈಸರ್ ಮಾಡಿಸಿಕೊಳ್ಳುವುದು.
- ಮುಖಗವಸುಗಳನ್ನು ಕಡ್ಡಾಯವಾಗಿ ಧರಿಸುವುದು.
- ಸುರಕ್ಷಿತ ವಿಧಾನದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುವುದನ್ನು ಹೊರತುಪಡಿಸಿ, ಊಟ, ಲಘು ಉಪಹಾರ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡತಕ್ಕದ್ದಲ್ಲ.
ಈ ಮೇಲ್ಕಂಡ ಮಾರ್ಗಸೂಚಿಗಳನ್ನು ಅನುಸರಿಸಿ, ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದು. ಇದರ ಹೊರತುಪಡಿಸಿ ಉಳಿದ ಯಾವುದೇ ಚಟುವಟಿಕೆಗಳನ್ನು ಆಯೋಜಿಸುವಂತಿಲ್ಲ. ಯಾವ ಹಂತಗಳಲ್ಲಿಯೂ ಸಹ ಮಕ್ಕಳು, ವಿದ್ಯಾರ್ಥಿಗಳು ಭಾಗವಹಿಸುವಂತಿಲ್ಲ ಎಂಬುದಾಗಿ ತಿಳಿಸಿದೆ.