ಹಿಂದೂ-ಮುಸ್ಲಿಂ ಆಟಕ್ಕೆ ಬ್ರೇಕ್ ಹಾಕಿದ ಮದ್ರಸಾ’
~ಶಂಸ್ ಗಡಿಯಾರ್
ಗಡಿಯಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಮಯ. ನಮ್ಮೂರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಬುಡೋಳಿ, ಪೇರಮೊಗರು ಮುಂತಾದ ಪಕ್ಕದೂರಿನ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯಲ್ಲಿದ್ದರು. ನಮ್ಮ ತರಗತಿಯಲ್ಲೂ ಈ ಎಲ್ಲಾ ಊರಿನ ವಿದ್ಯಾರ್ಥಿಗಳ ಹಾಜರಾತಿಯಿತ್ತು.ಪಿ.ಟಿ ಪಿರೀಡ್‌ನಲ್ಲಿ ಸಾಧಾರಣವಾಗಿ ಗಡಿಯಾರ VS ಬುಡೋಳಿ ಎಂಬಂತೆ ತಂಡ ಕಟ್ಟಿ ಕ್ರಿಕೆಟ್ ಆಡುತ್ತಿದ್ದ ನಾವು ಅದೇನೋ ಕೆಟ್ಟಘಳಿಗೆಯಲ್ಲಿ ಒಂದು ದಿನ ಹಿಂದೂ-ಮುಸ್ಲಿಂ ತಂಡವಾಗಿ ಆಡಲು ನಿರ್ಧರಿಸಿದ್ದೆವು.
ನಮ್ಮ ಈ ಹಿಂದೂ-ಮುಸ್ಲಿಂ ವಿಂಗಡಣೆ ಬರೀ ಆ ಒಂದು ಆಟಕ್ಕಾಗಿ ಸೀಮಿತವಾಗಿತ್ತೇ ಹೊರತು ನಮ್ಮೊಳಗೆ ಕೋಮುವಾದ, ಪರಧರ್ಮ ಅಸಹಿಷ್ಣುತೆಯ ಸಣ್ಣ ಗಾಳಿಯೂ ಸೋಕಿರಲಿಲ್ಲ. ನಿತಿನ್, ಮನೋಹರ್, ಪುಷ್ಪರಾಜ್, ಮನ್ಮಥ, ಸುನಿಲ್ ಮತ್ತು ಉಳಿದೆಲ್ಲಾ ಮುಸ್ಲಿಂ ವಿದ್ಯಾರ್ಥಿಗಳೂ ಒಂದೇ ತಾಯಿಯ ಮಕ್ಕಳಂತೆ ಅನ್ಯೋನ್ಯವಾಗಿದ್ದೆವು. ಅಷ್ಟಕ್ಕೂ ಈ ನಾಲ್ಕನೇ ತರಗತಿಯಲ್ಲಿ ಏನು ಕೋಮುವಾದ, ಜಾತಿವಾದ? ಅದೂ ಕೂಡ ಸರ್ಕಾರೀ ಶಾಲೆಯಲ್ಲಿ! ದುಷ್ಪರಿಣಾಮದ ಪರಿವೆಯಿಲ್ಲದೆ ಮಕ್ಕಳಾಟಿಕೆಯ ಬುದ್ಧಿಯಲ್ಲಿ ಉದಿಸಿದ ಕೆಟ್ಟ ಯೋಚನೆ ಮಾತ್ರವಾಗಿತ್ತು ಈ ಕ್ರಿಕೆಟ್ ಪಂದ್ಯಾಟ. ಪಂದ್ಯವನ್ನು ಮತ್ತಷ್ಟು ರೋಚಕಗೊಳಿಸುವ ನಿಟ್ಟಿನಲ್ಲಿ 5ನೇ ತರಗತಿಯ ಕೆಲವು ವಿದ್ಯಾರ್ಥಿಗಳನ್ನೂ ಝೀರೋ ಹರಾಜಿಗೆ ಖರೀದಿಸಿ ಜೊತೆ ಸೇರಿಸಿದ್ದೆವು. ಅಂತೂ ಪಿ.ಟಿ ಪಿರೀಡ್‌ನಲ್ಲಿ ಆಟ ಶುರುವಾಯಿತು. ಬ್ಯಾಟ್ಸ್ಮನ್ ಹೊಡೆದ ಚೆಂಡು ಶಾಲೆಯ ಗೇಟಿನಿಂದ ಹೊರಗೆ ಹೋಗಿ ಹೆದ್ದಾರಿಯನ್ನೂ ದಾಟಿತ್ತು. ಟೀಚರ್ಸ್‌ಗಳ ಕಣ್ತಪ್ಪಿಸಿ ಚೆಂಡು ಹೆಕ್ಕಿ ತರಲು ನಾನು ರಸ್ತೆ ದಾಟಿ ಹೋದಾಗ ನಮ್ಮ ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿ ಉಸ್ತಾದ್ (ಸುಮಾರು 20ವರ್ಷಗಳಷ್ಟು ಕಾಲ ನಮ್ಮೂರಿನಲ್ಲಿ ಖತೀಬರಾಗಿದ್ದರು. ಈಗ ಕೆಲವು ವರ್ಷಗಳಿಂದ ಪಜೀರು ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ) ತನ್ನ ಮನೆಗೆ ಹೋಗುವ ಮಧ್ಯೆ ಅಲ್ಲೇ ಹತ್ತಿರ ಒಬ್ಬರೊಂದಿಗೆ ಮಾತುಕತೆಯಲ್ಲಿ ನಿರತರಾಗಿದ್ದರು.
ಚೆಂಡು ಹುಡುಕುತ್ತಿದ್ದ ನನ್ನನ್ನು ಕಂಡು ಏನು ಆಟದ ಹುಚ್ಚು ಜೋರುಂಟಲ್ವಾ ಅಂತ ತಮಾಷೆ ಸ್ವರದಲ್ಲಿ ಕೇಳಿದಾಗ ಉಸ್ತಾ ‘ ನಾವು ಹಿಂದೂ ಮುಸ್ಲಿಂ ಕ್ರಿಕೆಟ್ ಆಡ್ತಿದ್ದೇವೆ ಎಂದು ನಾನು ಪ್ರಾಮಾಣಿಕವಾಗಿ ಉತ್ತರಿಸಿಬಿಟ್ಟಿದ್ದೆ. ತಕ್ಷಣ ಗಾಬರಿಗೊಂಡವರಂತೆ ಕಂಡ ಉಸ್ತಾದರು ಆ ರೀತಿ ಬೇಡ, ಎಲ್ಲರೂ ಒಂದಾಗಿ ಆಡಿ ಅಂತ ಹೇಳುವಾಗ ಆ ಧ್ವನಿಯಲ್ಲಿ ಬಹಳ ಗಂಭೀರತೆಯಿದ್ದರೂ ಅದನ್ನು ಅಷ್ಟೇ ಗಂಭೀರವಾಗಿ ಅರ್ಥೈಸುವ ಪಕ್ವತೆಯಂತೂ ನನ್ನಲ್ಲಿರಲಿಲ್ಲ. ಜಾಸ್ತಿ ಹೊತ್ತು ಅಲ್ಲೇ ನಿಲ್ಲುವಂತೆ ಇಲ್ಲದಿದ್ದ ಕಾರಣ ಬೇಗ ಶಾಲೆಯ ಮೈದಾನವನ್ನು ಸೇರಿದ ನಾನು ಗೆಳೆಯರೊಂದಿಗೆ ಉಸ್ತಾದ್ ಹೇಳಿದ್ದನ್ನು ಹಂಚಿಕೊಂಡೆ. ಹಾಗೇ ಆ ದಿನದ ಆಟ ಅಪೂರ್ಣ ರೀತಿಯಲ್ಲಿ ಮುಕ್ತಾಯವಾಯಿತು.
ಅಂದು ಮಗ್ರಿಬ್ ವೇಳೆ ಮದರಸಾದಲ್ಲಿ ನಮ್ಮ ಕ್ಲಾಸ್ ಉಸ್ತಾದ್ ಪಾಠದ ಮಧ್ಯೆ ತಕ್ಷಣ ಏನೋ ನೆನಪಾದವರಂತೆ ಕಿತಾಬ್ ಮಡಚಿ ನಿಮ್ಮೊಂದಿಗೆ ಖತೀಬುಸ್ತಾದ್ ಒಂದು ಇಂಪಾರ್ಟೆಂಟ್ ವಿಷಯ ಹೇಳಲಿಕ್ಕೆ ಸೂಚಿಸಿದ್ದಾರೆ ಎನ್ನುತ್ತಾ ಮಾತಿಗಿಳಿದರು. ಅಲ್ಲಲ್ಲಿ ವರದಿಯಾಗುವ ಕೋಮುಗಲಭೆ ಮತ್ತು ನಾವು ಪಾಲಿಸಬೇಕಾದ ಮತೀಯ ಸೌಹಾರ್ದತೆ ಹೀಗೇ ಮಾತಿನ ವರಸೆ ಸಾಗಬೇಕಾದರೆ ಇದು ಶಾಲೆಯಲ್ಲಿ ನಮ್ಮ ಹಿಂದೂ-ಮುಸ್ಲಿಂ ಕ್ರಿಕೆಟ್ ಆಟದ ಹಿನ್ನೆಲೆಯಲ್ಲಿ ಖತೀಬ್ ಉಸ್ತಾದ್ ನಿರ್ದೇಶನ ನೀಡಿದ್ದೇನೋ ಎಂದು ಸಂಶಯವಾಯಿತು. ಊಹೆ ಸುಳ್ಳಾಗಲಿಲ್ಲ! ಉಸ್ತಾದರು ಕೊನೆಗೆ ಖತೀಬುಸ್ತಾದ್ ತನ್ನೊಂದಿಗೆ ತಿಳಿಸಿದ್ದ ಪ್ರಕಾರ ಶಾಲೆಯ ಪ್ರಸ್ತುತ ಘಟನೆಯನ್ನು ಉಲ್ಲೇಖಿಸಿ ಆ ರೀತಿ ಮುಂದುವರಿದರೆ ನಮ್ಮೊಳಗೆ ರೂಪುಗೊಳ್ಳಬಹುದಾದ ಅಸಹಿಷ್ಣುತೆ, ದುಷ್ಪರಿಣಾಮಗಳೆಲ್ಲವನ್ನೂ ಬಿಡಿಸಿ ಹೇಳಿ ಇನ್ನೆಂದಿಗೂ ಆ ರೀತಿ ಆಡಬಾರದೆಂದೂ, ಧರ್ಮದ ಭಿನ್ನತೆಯಿಲ್ಲದೆ ಆಟ-ಪಾಠ ಎಲ್ಲದರಲ್ಲೂ ಒಗ್ಗಟ್ಟಿರಬೇಕೆಂದು ತಾಕೀತು ಮಾಡಿದರು.ಉಸ್ತಾದರ ಸುದೀರ್ಘ ಹಿತೋಪದೇಶ ಕೇಳಿ ನಿಜಕ್ಕೂ ನಾನು ಅಚ್ಚರಿಗೊಂಡಿದ್ದೆ. ಕಾರಣ ನಾವು ಪರಸ್ಪರ ಯಾವುದೇ ವಿಧ್ವೇಷವಿಲ್ಲದೇ ಬರೀ ಮನರಂಜನೆಗಾಗಿ ಆಡಿದ್ದನ್ನು ಖತೀಬುಸ್ತಾದ್ ಇಷ್ಟು ಗಂಭೀರವಾಗಿ ಪರಿಗಣಿಸಿ ಅಷ್ಟು ಹೊತ್ತು ಅದನ್ನೇ ತಲೆಯಲ್ಲಿ ಹೊತ್ತು ನಂತರ ಕ್ಲಾಸ್ ಉಸ್ತಾದರ ಮುಖೇನ ಎಚ್ಚರಿಕೆ ನೀಡಬೇಕಾದರೆ ವಿಷಯದ ಗೌರವ ಅರ್ಥವಾಯಿತು.
ಉಸ್ತಾದ್ ತಿಳಿಸಿದಂತೆಯೇ ನಮ್ಮ ಹಿಂದೂ-ಮುಸ್ಲಿಂ ಆಟ ಒಂದೇ ದಿನಕ್ಕೆ ಬ್ರೇಕ್ ಹಾಕಿದೆವು . ಮತ್ತೆಂದೂ ಹಾಗೆ ಆಡುವ ಗೋಜಿಗೇ ಹೋಗಲಿಲ್ಲ.ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಮದರಸಾ ಅನುಭವ, ಅಭಿಪ್ರಾಯಗಳನ್ನು ಮಂಡಿಸಿ ಮುಗಿಸಿರುವಾಗ ತಡವಾಗಿಯಾದರೂ ನನ್ನ ಈ ಅನುಭವ ಕಥೆಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.ನಮಾಝ್, ದ್ಸಿಕ್ರ್-ದುಆ ಮಾತ್ರ ಅಲ್ಲ, ಇಸ್ಲಾಂ ಪ್ರತಿಪಾದಿಸಿದ ನಿತ್ಯ ಬದುಕಿನಲ್ಲಿ ಪಾಲಿಸಬೇಕಾದ ಧಾರ್ಮಿಕ, ನೈತಿಕ ಮೌಲ್ಯಗಳನ್ನೂ ಮದರಸಾ ಬೋಧಿಸುತ್ತದೆ. ಮದರಸಾ ಎಂದರೆ ಭಯೋತ್ಪಾದಕರನ್ನು ಸೃಷ್ಟಿಸುವ ಕೇಂದ್ರವೆಂದು ಬೊಗಳುವ ನಾಗ್ಪುರದ ವಿಷ ಕಾರ್ಖಾನೆಯ ನಿಷ್ಠ ಕಾರ್ಮಿಕರ ಕುಹಕಗಳಿಗೆ ಪ್ರತ್ಯುತ್ತರ ನೀಡಬೇಕಿಲ್ಲವಾದರೂ ಅವರ ಅಪಪ್ರಚಾರ, ಧ್ವೇಷ ಭಾಷಣಗಳ ಹಳ್ಳಕ್ಕೆ ಅನ್ಯಧರ್ಮೀಯ ಅಮಾಯಕರು ಬೀಳದಿರಲಿ ಎಂಬ ಕಾಳಜಿಯಿಂದ ಮದರಸಾದ ಕುರಿತು ಬರೆಯಬೇಕಾಗಿದೆ. ವಾಸ್ತವ ಗೊತ್ತಿದ್ದೂ ಮಸೀದಿ, ಮದರಸಾ, ಮುಸ್ಲಿಮ್ಸ್ ವಿರುದ್ಧ ಬಾಲಿಶವಾಗಿ ಭಾಷಣ ಬಿಗಿಯುವುದು ಜನಪ್ರತಿನಿಧಿಗಳೆಂಬ ಜವಾಬ್ದಾರಿ ಹೊತ್ತಿರುವವರಿಗಂತೂ ಭೂಷಣವೇ ಅಲ್ಲ.