ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿ ‘ಗಂಭೀರ’ ಭಾರತೀಯರ ಸ್ಥಳಾಂತರಕ್ಕೆ ಮೊದಲ ಆದ್ಯತೆ
ನವದೆಹಲಿ: ಅಫ್ಗಾನಿಸ್ತಾನದಲ್ಲಿ ‘ಗಂಭೀರ’ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತೀಯರ ಸ್ಥಳಾಂತರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರವು ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ತಿಳಿಸಿದೆ.
ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ತನ್ನ ಸಂಪೂರ್ಣ ಅಧಿಪತ್ಯ ಸ್ಥಾಪಿಸಿದ್ದು, ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವು ದೇಶಗಳು ತಮ್ಮ ನಾಗರಿಕರ ಸ್ಥಳಾಂತರಕ್ಕಾಗಿ ಕಾರ್ಯಾಚರಣೆ ನಡೆಸಿವೆ. ಭಾರತೀಯರ ಸ್ಥಳಾಂತರದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕೂಡಾ ಉಪಸ್ಥಿತರಿದ್ದರು.
ಅಫ್ಗಾನಿಸ್ತಾನದಿಂದ ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಭೆಯಲ್ಲೂ ಇದೇ ಅಭಿಪ್ರಾಯ ಮೂಡಿಬಂದಿದ್ದು, ಭಾರತೀಯರನ್ನು ಕರೆ ತರಲು ಮೊದಲ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಯುದ್ಧಪೀಡಿತ ಅಫ್ಗನ್‌ನ ಸದ್ಯದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ದೋಹಾ ಒಪ್ಪಂದದಲ್ಲಿ ನೀಡಿದ್ದ ಭರವಸೆಗಳನ್ನು ತಾಲಿಬಾನ್ ಮುರಿದಿದೆ ಎಂದು ವಿವರಣೆ ನೀಡಿದರು.
ಎನ್‌ಸಿಪಿ ನಾಯಕ ಶರದ್ ಪವಾರ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕೆ ನಾಯಕ ಟಿ.ಆರ್. ಬಾಲು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅಪ್ನಾ ದಳದ ಅನುಪ್ರಿಯಾ ಪಟೇಲ್ ಮುಂತಾದವರು ಭಾಗವಹಿಸಿದ್ದರು