ಅಂತಾರಾಷ್ಟ್ರೀಯ

ಅಮೆರಿಕಕ್ಕೆ ‘ಸುವರ್ಣಯುಗ’ ಮತ್ತೆ ಮರಳಿಸುವೆ: ಡೊನಾಲ್ಡ್​ ಟ್ರಂಪ್​

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​​ ಟ್ರಂಪ್​ ಅಭೂತಪೂರ್ವ ಜಯ ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಇದರ ಬೆನ್ನಲ್ಲೇ ವಿಜಯದ ಮೊದಲ ಭಾಷಣ ಮಾಡಿರುವ ಟ್ರಂಪ್​, ಅಮೆರಿಕಕ್ಕೆ ಮತ್ತೆ “ಸುವರ್ಣಯುಗ” ತರುವುದಾಗಿ ವಾಗ್ದಾನ ಮಾಡಿದರು.

ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ನೀಡಿದ್ದೀರಿ. ಈ ಜನಾದೇಶದೊಂದಿಗೆ ಅಮೆರಿಕವನ್ನು ಮತ್ತೆ ಸುವರ್ಣಯುಗದ ಹಳಿಗೆ ತರುವೆ. ದೇಶವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸಲು ಪ್ರತಿಕ್ಷಣವೂ ಪ್ರಯತ್ನಿಸುವೆ ಎಂದು ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಪಾಮ್ ಬೀಚ್ ಕನ್ವೆನ್ಷನ್ ಸೆಂಟರ್‌ನಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು.

“ಇದು ಹಿಂದೆಂದೂ ನೋಡಿರದಂತಹ ರಾಜಕೀಯ ಹೋರಾಟವಾಗಿದೆ. ನಾನು ಕಂಡ ಅತಿ ಕಠಿಣ ಚುನಾವಣೆಯಾಗಿದೆ. ಬಹುಶಃ ಇದು ದೇಶದ ಇತಿಹಾಸದಲ್ಲೂ ಮೊದಲಿದ್ದರೂ ಅಚ್ಚರಿಯೇನಲ್ಲ. ನೀವು ನೀಡಿದ ವಿಜಯದಿಂದ ದೇಶವನ್ನು ಕಟ್ಟಲು ಸಹಾಯಕವಾಗಲಿದೆ ಎಂದರು.

ಸಮೃದ್ಧ ದೇಶ ಕಟ್ಟುವೆ: ಇದು ನನ್ನ ಜೀವನದ ಅತ್ಯಂತ ಪ್ರಮುಖ ಗಳಿಗೆಯಾಗಿದೆ. ನನ್ನ ಸರ್ವಸ್ವವನ್ನು ಅಮೆರಿಕಕ್ಕೆ ಸಮರ್ಪಿಸುವೆ. ದೇಶದ ಪ್ರತಿ ನಾಗರಿಕ, ಕುಟುಂಬಕ್ಕಾಗಿ ಮತ್ತು ನಮ್ಮ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತೇವೆ. ಪ್ರತಿದಿನ, ನಾನು ಉಸಿರಾಡುವವರೆಗೆ ನಿಮಗಾಗಿ ಹೋರಾಡುವೆ. ಮುಂದಿನ ಪೀಳಿಗೆಗೆ ಅರ್ಹವಾದ, ಸುರಕ್ಷಿತ ಮತ್ತು ಸಮೃದ್ಧ ದೇಶವನ್ನು ಕಟ್ಟಿಕೊಡಲು ಶ್ರಮಿಸುವೆ ಎಂದು ಭರವಸೆ ನೀಡಿದರು.

ಅಕ್ರಮ ವಲಸೆ ನಿಲ್ಲಿಸುವ ಭರವಸೆ ನೀಡಿದ ಟ್ರಂಪ್​: ತಮ್ಮ ಭಾಷಣದಲ್ಲಿ ಟ್ರಂಪ್ ಅವರು ಅಕ್ರಮ ವಲಸೆಯನ್ನು ನಿಲ್ಲಿಸುವ ಬಗ್ಗೆಯೂ ಮಾತನಾಡಿದರು. ನಾವು ಸೆನೆಟ್‌ನಲ್ಲಿ ಬಹುಮತ ಪಡೆದಿದ್ದೇವೆ. ನನಗಾಗಿ ಉದ್ಯಮಿ ಎಲಾನ್​ ಮಸ್ಕ್​​ ಅವರು ಬಹುವಾಗಿ ಶ್ರಮಿಸಿದರು. ಅವರ ಉತ್ಸಾಹ ಮತ್ತು ಪಾಲ್ಗೊಳ್ಳುವಿಕೆಯು ನನಗೆ ದೊಡ್ಡ ಜಯ ತಂದಿದೆ. ಅದೇ ರೀತಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್​ ಅವರು ಕೂಡ ನನ್ನ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂದು ಅವರ ಹೆಸರನ್ನೂ ಪ್ರಸ್ತಾಪಿಸಿದರು.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್‌ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಯ ವೇಳೆಗೆ 267 ಮತಗಳನ್ನು ಪಡೆದಿದ್ದರು. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್‌ಗೆ 224 ಮತಗಳು ಬಂದಿವೆ. ಟ್ರಂಪ್ ಗೆಲುವಿಗೆ ಕೇವಲ ಮೂರು ಮತಗಳು ಬೇಕಿದೆ.

ಬ್ಯಾಟಲ್​ಗ್ರೌಂಡ್​ನಲ್ಲಿ ಟ್ರಂಪ್​ ಕಮಾಲ್: ಏಳು ‘ಬ್ಯಾಟಲ್‌ಗ್ರೌಂಡ್‌’ ರಾಜ್ಯಗಳಲ್ಲಿ ಟ್ರಂಪ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾ, ಅರಿಜೋನಾ, ಜಾರ್ಜಿಯಾ, ಮಿಷಿಗನ್‌, ವಿಸ್ಕಾನ್‌ಸ್ಕಿನ್‌ ಮತ್ತು ನೆವಾಡದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ರಾಜ್ಯಗಳು ಅಭ್ಯರ್ಥಿಗಳ ಪಾಲಿಗೆ ನಿರ್ಣಾಯಕವಾಗಿವೆ. ಅಮೆರಿಕದ 50 ರಾಜ್ಯಗಳಲ್ಲಿ ಈ ಏಳು ರಾಜ್ಯಗಳ ಮತದಾರರನ್ನು ಹೊರತುಪಡಿಸಿ ಹೆಚ್ಚಿನ ರಾಜ್ಯಗಳ ಮತದಾರರು ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ.

Related Articles

Back to top button