ಮಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಅನ್ವಯಗೊಂಡ ಬಿಎಡ್ ಮೂರನೇ ಸೆಮಿಸ್ಟರ್ ಮೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿರುವ ಪಠ್ಯಪುಸ್ತಕದಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಂಮರ , ಪ್ರವಾದಿ ಮುಹಮ್ಮದ್ (ಸ) ರವರ ಕುರಿತು ಪೂರ್ವಗ್ರಹಪೀಡಿತ, ಅವಹೇಳನಾಕಾರಿ ಅಂಶಗಳನ್ನು ತುರುಕಿದ್ದು, ಲೇಖಕರಾದ ಬಿಆರ್ ರಾಮಚಂದ್ರಯ್ಯರವರ ವಿರುಧ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲಾ ಸಮಿತಿಯು ಕಾವೂರು, ಬಜ್ಪೆ, ಪಾಂಡೇಶ್ವರ ಮತ್ತು ಬಂದರು ಠಾಣೆಗಳಿಗೆ ದೂರು ದಾಖಲಿಸಿಲಾಯಿತು.
ತುಮಕೂರಿನ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕ ಬಿ.ಆರ್ ರಾಮಚಂದ್ರಯ್ಯ ಎಂಬವರು ಬರೆದಿರುವ ಮೈಸೂರಿನ ವಿಸ್ಮಯ ಪ್ರಕಾಶನ ಪ್ರಕಟಿಸಿರುವ “ಮೌಲ್ಯ ದರ್ಶನ ದಿ ಎಸ್ಸೆನ್ಸ್ ಆಫ್ ವ್ಯಾಲ್ಯೂ ಎಜುಕೇಶನ್” ಎಂಬ ಆಂಗ್ಲ ಕೃತಿಯಲ್ಲಿ ಇಸ್ಲಾಂ, ಮುಸ್ಲಿಂಮರನ್ನು ಮತ್ತು ಪ್ರವಾದಿ ಮುಹಮ್ಮದ್ (ಸ) ರವರನ್ನು ನಿಂದಿಸಲಾಗಿದೆ. ಈ ಕೃತಿಯನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಕೂಡ ಬಿಎಡ್ ಮೂರನೇ ಸೆಮಿಸ್ಟರ್ ಪಠ್ಯಪುಸ್ತಕವಾಗಿ ಆಯ್ಕೆಮಾಡಿಕೊಂಡಿದೆ.
ಉದ್ದೇಶಪೂರ್ವಕರಾಗಿ ಕೋಮುಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಲೇಖಕ ಹಾಗೂ ಪ್ರಕಾಶಕರ ವಿರುಧ್ದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲಾ ನಿಯೋಗವು ಕಾವೂರು, ಬಜ್ಪೆ, ಪಾಂಡೆಶ್ವರ ಮತ್ತು ಬಂದರು ಠಾಣೆಯ ವೃತ್ತ ನಿರೀಕ್ಷಕರಿಗೆ ದೂರು ದಾಖಲಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷ ಶರ್ಫುಧ್ಧೀನ್ ಬಜ್ಪೆ, ಕಾರ್ಯದರ್ಶಿ ಹಫೀಝ್, ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೂರ್ಕೋಡಿ, ಉಪಾಧ್ಯಕ್ಷ ಝಹೀರ್, ಕೋಶಾಧಿಕಾರಿ ಹಕೀಮ್ , ಶಬೀರ್, ಶಿಫಾನ್ ಮತ್ತು ಅಫ್ತಾಬ್ ಉಪಸ್ಥಿತರಿದ್ದರು.