ಕರಾವಳಿಮಂಗಳೂರು

ಏರಿಸಿದ ಬಸ್ ಪ್ರಯಾಣ ದರವನ್ನು ಕೂಡಲೇ ತಡೆಹಿಡಿದು,ಸಾರಿಗೆ ಪ್ರಾಧಿಕಾರದ ಸಭೆ ಕರೆಯಲು ಒತ್ತಾಯಿಸಿ ಐಕ್ಯ ಪ್ರತಿಭಟನೆ

ಮಂಗಳೂರು : ಖಾಸಗೀ ಬಸ್ ಪ್ರಯಾಣ ದರದ ವಿಪರೀತ ಏರಿಕೆಯನ್ನು ವಿರೋಧಿಸಿ, ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ, ಏರಿಸಿದ ಬಸ್ ಪ್ರಯಾಣ ದರವನ್ನು ಕೂಡಲೇ ತಡೆಹಿಡಿದು,ಸಾರಿಗೆ ಪ್ರಾಧಿಕಾರದ ಸಭೆ ಕರೆಯಲು ಒತ್ತಾಯಿಸಿ ದ.ಕ.ಜಿಲ್ಲೆಯ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಕಾರ್ಯಕರ್ತರು, ಬಸ್ ಮಾಲಕರ ದುರ್ವರ್ತನೆ ಹಾಗೂ ಜನವಿರೋಧಿಯಾಗಿ ವರ್ತಿಸುತ್ತಿರುವ ಜಿಲ್ಲಾಡಳಿತದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು

CPIM ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಮಾತನಾಡುತ್ತಾ, ಪೆಟ್ರೋಲಿಯಂ ಉತ್ಪನ್ನಗಳ ಹಾಗೂ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯಿಂದಾಗಿ ಕಂಗೆಟ್ಟ ಜನಸಾಮಾನ್ಯರ ಬದುಕಿಗೆ ಬಸ್ ಪ್ರಯಾಣ ದರಯೇರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಪರಿತಪಿಸುತ್ತಿರುವ ದುಡಿಯುವ ಜನತೆಗೆ ಈ ಬಾರಿಯ ಪ್ರಯಾಣ ದರವನ್ನು ಅರಗಿಸಿಕೊಳ್ಳಲು ಸಾದ್ಯವೇ ಇಲ್ಲ.ಇಂತಹ ಸಂದರ್ಭದಲ್ಲಿ ಜನಪರವಾಗಿ ಯೋಚಿಸಬೇಕಾದ ಜಿಲ್ಲಾಡಳಿತ ಬಸ್ ಮಾಲಕರ ಏಜೆಂಟರಂತೆ ವರ್ತಿಸಿರುವುದು ತೀರಾ ಖಂಡನೀಯ ಎಂದು ಜಿಲ್ಲಾಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಜಿಲ್ಲಾ ವಕ್ತಾರರಾದ ಅಭಿಷೇಕ್ ಉಳ್ಳಾಲ್ ರವರು ಮಾತನಾಡುತ್ತಾ, ಅವಿಭಜಿತ ದ.ಕ.ಜಿಲ್ಲೆಯ ಸಂಪ್ರದಾಯದಂತೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಬಸ್ ಮಾಲಕರ ಹಾಗೂ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಬಳಿಕ ಬಸ್ ಪ್ರಯಾಣ ದರವನ್ನು ನಿಗದಿಪಡಿಸಬೇಕಾಗಿದ್ದ ಜಿಲ್ಲಾಡಳಿತವು ಸಂಪೂರ್ಣವಾಗಿ ಬಸ್ ಮಾಲಕರ ಕೈವಶವಾಗಿದ್ದು,ತನ್ನ ಮನ ಬಂದಂತೆ ಜನರನ್ನು ದೋಚಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

CPI ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜರವರು ಮಾತನಾಡಿ ,ಈ ಹಿಂದೆ ಇದ್ದ ನಗರ ಹಾಗೂ ಗ್ರಾಮಾಂತರ ಸಾರಿಗೆಯನ್ನು ವಿಲೀನಗೊಳಿಸಿರುವುದು ಮಾತ್ರವಲ್ಲದೆ ಕನಿಷ್ಠ ದರ ನಿಗದಿಯಲ್ಲಿ,ಎರಡನೆಯ ಸ್ಟೇಜ್ ನ್ನು ತೆಗೆಯುವಲ್ಲಿ ಹಾಗೂ ಕಿ.ಮೀ.ನಲ್ಲೂ ಜನತೆಗೆ ಭಾರೀ ದೊಡ್ಡ ಮೋಸವೆಸಗಲಾಗಿದೆ. ಪೆಟ್ರೋಲ್ ಡೀಸೆಲ್‌ ಬೆಲೆಯೇರಿಕೆಯ ವಿರುದ್ಧ ಕನಿಷ್ಟ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸದ ಬಸ್ ಮಾಲಕರು ತಮ್ಮ ಸಂಕಷ್ಟವನ್ನು ಜನತೆಯ ಮೇಲೆ ಹೊರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CPIM ನಾಯಕರಾದ ಸುನಿಲ್ ಕುಮಾರ್ ಬಜಾಲ್ ರವರು, ಈ ಬಾರಿಯ ಬಸ್ ಪ್ರಯಾಣ ದರ ಹೆಚ್ಚಿಸುವಲ್ಲಿ ಬಸ್ ಮಾಲಕರು ಹಾಗೂ ಜಿಲ್ಲಾಡಳಿತ ಜೊತೆ ಸೇರಿ ಮಾಡಿದ ಮೋಸ ಕುತಂತ್ರಗಳ ಬಗ್ಗೆ ಎಳೆಎಳೆಯಾಗಿ ವಿವರಿಸುತ್ತಾ,ಇಂತಹ ತೀವ್ರ ಸಂಕಷ್ಟದ ಕಾಲದಲ್ಲಿ ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ದಿವ್ಯ ಮೌನ ವಹಿಸಿರುವುದು ತೀರಾ ಖಂಡನೀಯ ಎಂದು ಹೇಳುತ್ತಾ,ಬಸ್ ಪ್ರಯಾಣ ದರ ಇಳಿಕೆಯಾಗದಿದ್ದಲ್ಲಿ ಜಿಲ್ಲೆಯಾದ್ಯಂತ ತೀವ್ರ ರೀತಿಯ ಐಕ್ಯ ಹೋರಾಟವನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದಲಿತ ಸಂಘಟನೆಯ ಹಿರಿಯ ನಾಯಕರಾದ ಎಂ.ದೇವದಾಸ್, JDS ನಾಯಕರಾದ ಸುಮತಿ ಎಸ್ ಹೆಗ್ಡೆ ಯವರು ಮಾತನಾಡಿ,ಏರಿಸಿದ ದರವನ್ನು ಕೂಡಲೇ ತಡೆಹಿಡಿದು,ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ CPIM ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್,ಮುನೀರ್ ಕಾಟಿಪಳ್ಳ, ಜಯಂತಿ ಶೆಟ್ಟಿ, ದಯಾನಂದ ಶೆಟ್ಟಿ,ಕಾಂಗ್ರೆಸ್ ನಾಯಕರಾದ ಸದಾಶಿವ ಉಳ್ಳಾಲ್,ನೀರಜ್ ಪಾಲ್, ಮಹಮ್ಮದ್ ಕುಂಜತ್ತಬೈಲ್, ಭರತೇಶ್ ಅಮೀನ್, ಹೊನ್ನಯ್ಯ,ಯಶವಂತ ಪ್ರಭು,ಉದಯ ಕುಂದರ್, ರೋಬಿನ್ ಪ್ರೀತಂ,ದುರ್ಗಾ ಪ್ರಸಾದ್,CPI ನಾಯಕರಾದ ವಿ.ಕುಕ್ಯಾನ್,ಬಿ.ಶೇಖರ್, ಕರುಣಾಕರ್, ಜಗತ್ಪಾಲ್, ಪುಷ್ಪಾರಾಜ್ ಬೋಳೂರು,JDS ನಾಯಕರಾದ ಅಲ್ತಾಫ್ ತುಂಬೆ,ಹರ್ಷಿತಾ,ಶಾರದಾ, ಚೂಡಾಮಣಿ,ಲತೀಫ್, ರಿಯಾಜ್,ದಲಿತ ಸಂಘಟನೆಗಳ ಮುಖಂಡರಾದ ತಿಮ್ಮಯ್ಯ ಕೊಂಚಾಡಿ,ರಘು ಎಕ್ಕಾರು, ಕ್ರಷ್ಣ ತಣ್ಣೀರುಬಾವಿ,ವಿಶು ಕುಮಾರ್, ರಘುವೀರ್,DYFI ನಾಯಕರಾದ ನೌಷಾದ್ ಬೆಂಗರೆ,ಅನಿಲ್ ಡಿಸೋಜ, ಮಹಿಳಾ ಸಂಘಟನೆಗಳ ಮುಖಂಡರಾದ ರೇಣುಕಾ, ಪದ್ಮಾವತಿ, ಭಾರತಿ ಬೋಳಾರ, ಜಯಲಕ್ಷ್ಮಿ ಜಪ್ಪಿನಮೊಗರು, ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button