ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಯುವ ಚೈತನ್ಯ ಕಾಂಗ್ರೆಸ್ ಕಾರ್ಯಾಗಾರ ಹಾಗೂ ಪದಗ್ರಹಣ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ವಿರೋಧಿಸಿ ಅವತ್ತು ಪಾದಯಾತ್ರೆ ಮಾಡಿದ ನಳೀನ್ ಕುಮಾರ್ ಕಟೀಲ್ ತಾಕತ್ತಿದ್ರೆ ಈಗ ಆ ಯೋಜನೆಯನ್ನು ನಿಲ್ಲಿಸಲಿ. ಜನರನ್ನು ಮೋಸ ಮಾಡಿ ವೋಟು ಗಳಿಸುವುದು ಬಹಳ ಸುಲಭ. ಅದನ್ನೇ ನಳೀನ್ ಮಾಡಿದ್ರು ಎಂದು ಕಿಡಿಕಾರಿದ್ರು.
ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ವತಿಯಿಂದ ಸೋಮವಾರ ಸಂಜೆ ಮೊಡಂಕಾಪುವಿನ ಚರ್ಚ್ ಸಭಾಂಗಣದಲ್ಲಿ ನಡೆದ ಯುವ ಚೈತನ್ಯ ಕಾರ್ಯಗಾರ ಹಾಗೂ ಬೂತ್ ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ಮಾತನಾಡಿ, ಎಲ್ಲ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಜನರನ್ನು ಒಟ್ಟು ಸೇರಿಸುವ ಜೊತೆಗೆ ಜನರ ಬದುಕು ಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದರೆ, ಧರ್ಮ, ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಂಟ್ವಾಳ ಕ್ಷೇತ್ರದಲ್ಲಿ ರಮನಾಥ ರೈ ಮಾಡಿದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮರೆ ಮಾಚಲು ಯಾರಿಂದಲೂ ಸಾಧ್ಯವಿಲ್ಲ. ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ಮರಳು ಗೊಳಿಸಲಾಗುತ್ತಿದೆ, ಜಾತ್ಯತೀತ ಶಕ್ತಿ ಕ್ಷೀಣಿಸಿದಾಗ ಕೋಮುಶಕ್ತಿಗಳು ಬಲಗೊಳ್ಳುತ್ತದೆ ಎಂದರು. ಇದೇ ಸಂದರ್ಭ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿದರು..
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡಿ ಮನುವಾದವನ್ನು ಸಮಾಜದಲ್ಲಿ ಜಾರಿಗೊಳಿಸಲು ಗಾಂಧೀಜಿಯ ಹತ್ಯೆಯಾಯಿತು. ಇಂದಿಗೂ ನಮ್ಮ ನಡುವೆ ಮನುವಾದಿಗಳು, ಗೋಡ್ಸೆವಾದಿಗಳು ಇದ್ದಾರೆ. ಇಂತವರ ವಿರುದ್ಧ ಸೈದ್ದಾಂತಿಕ ಹೋರಾಟ ಮಾಡಬೇಕಾಗಿದೆ. ಸಂವಿಧಾನ ವಿರೋಧಿಗಳನ್ನು ನಾವು ಎಂದಿಗೂ ವಿರೋಧಿಸುತ್ತೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಕೊಪ್ಪ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮತ್ತು ಬೇಬಿ ಕುಂದರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು,ಸಾಮಾಜಿಕ ಜಾಲತಾಣ ತಮಿಳುನಾಡು ಉಸ್ತುವಾರಿ ಸಾಗರ್ ಕಟೀಲ್, ರಾಜ್ಯ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಸಿಂಧ್ಯಾ, ಸೇರಿದಂತೆ, ಮೊದಲಾದವರು ಉಪಸ್ಥಿತರಿದ್ದರು.