ಕೋಲಾರ : ಕೊರೋನಾ ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜುಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. ಆದ್ರೇ.. ಎಷ್ಟೇ ಜಾಗ್ರತೆ ವಹಿಸಿದ್ರೂ ಕೊರೋನಾ ಶಾಕ್ ಮಾತ್ರ ತಪ್ಪಿಲ್ಲ. ಹಾಸನದ ನರ್ಸಿಂಗ್ ಕಾಲೇಜಿನ ನಂತ್ರ, ಕೋಲಾರದ ನರ್ಸಿಂಗ್ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಕೋಲಾರ ಜಿಲ್ಲೆಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಅದರಲ್ಲೂ ಎರಡು ದಿನಗಳ ಹಿಂದೆ ಬಂದಿದ್ದಂತ ಇಬ್ಬರು ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯವರು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ, ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಕಾಲೇಜಿನ 200 ವಿದ್ಯಾರ್ಥಿಗಳನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಂತಹ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ಒಟ್ಟು 15 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಕಾಲೇಜು ಸೀಲ್ ಡೌನ್ ಮಾಡಲಾಗಿದ್ದು, ಸೋಂಕಿತ ವಿದ್ಯಾರ್ಥಿಗಳನ್ನು ಕೊರೋನಾ ಕೇರ್ ಸೆಂಟರ್ ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ ಶಾಕ್ ನಿಂದಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.