ಕ್ರೀಡೆ

ನೀವು ಚಿಕ್ಕವರಾಗಿದ್ದಾಗ, ನಾನು ಬ್ಯಾಟಿಂಗ್ ಮಾಡುವ ರೀತಿಯನ್ನು ನೋಡಿಲ್ಲವೇನೋ – ರಾಹುಲ್ ದ್ರಾವಿಡ್

ರಾಜ್‌ಕೋಟ್‌ : ಚುಟುಕು ಕ್ರಿಕೆಟ್‌ ಅನ್ನು ಅಕ್ಷರಶಃ ಆಳುತ್ತಿರುವ ಸೂರ್ಯಕುಮಾರ್ ಯಾದವ್, ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೂರನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಲೀಲಾಜಾಲವಾಗಿ ರನ್‌ ಗಳಿಸುತ್ತಿರುವ ಸೂರ್ಯಕುಮಾರ್ ಯಾದವ್, ಎದುರಾಳಿ ತಂಡದ ಬೌಲಿಂಗ್‌ ಪಡೆಯನ್ನು ಕನಸಿನಲ್ಲಿಯೂ ಕಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ರಾಜ್‌ಕೋಟ್‌ನಲ್ಲಿ ಲಂಕಾ ವಿರುದ್ದ ನಡೆದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಇದೀಗ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್, ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಕುರಿತಂತೆ ಹಾಸ್ಯಮಯವಾಗಿ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ರಾಹುಲ್ ದ್ರಾವಿಡ್‌ ಮನಬಿಚ್ಚಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಆ ವಿಡಿಯೋದಲ್ಲಿ ರಾಹುಲ್ ದ್ರಾವಿಡ್‌, ಸೂರ್ಯಕುಮಾರ್ ಯಾದವ್ ಅವರನ್ನು ಉದ್ದೇಶಿಸಿ, ನೀವು ಚಿಕ್ಕವರಾಗಿದ್ದಾಗ, ನಾನು ಬ್ಯಾಟಿಂಗ್ ಮಾಡುವ ರೀತಿಯನ್ನು ನೋಡಿಲ್ಲವೇನೋ ಎಂದು ಕಾಲೆಳೆದಿದ್ದಾರೆ. ‘ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್, ತಾವು ಕ್ರಿಕೆಟ್ ಆಡುವ ಸಂದರ್ಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಅನ್ವರ್ಥಕನಾಮ ಎನ್ನುವಂತಿದ್ದರು. ಆದರೆ ಇದೀಗ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಇದಕ್ಕೆ ವ್ಯತಿರಿಕ್ತ ಎನ್ನುವಂತಿರುವುದರ ಬಗ್ಗೆ ತಮಾಷೆ ಮಾಡಿದ್ದಾರೆ.

” ನನ್ನ ಜತೆ ಇರುವ ಇವರು, ಚಿಕ್ಕವರಿದ್ದಾಗ ನನ್ನ ಬ್ಯಾಟಿಂಗ್‌ ನೋಡಿಲ್ಲವೆಂದುಕೊಳ್ಳುತ್ತೇನೆ. ನೀವು ಇಂದು ಅದ್ಭುತವಾಗಿ ಆಡಿದಿರ. ಇದರ ಜತೆಗೆ ಅತ್ಯುತ್ತಮ ಫಾರ್ಮ್‌ ಅನ್ನು ನೀವು ಹೊಂದಿದ್ದೀರ. ಪ್ರತಿ ಬಾರಿಯು ನಾನು ನನ್ನ ನಿಮ್ಮಿಂದ ಅತ್ಯುತ್ತಮ ಟಿ20 ಇನಿಂಗ್ಸ್‌ಗಳನ್ನು ನೋಡುತ್ತಲೇ ಇದ್ದೇನೆ. ಇಂದು ನೀವು ಮತ್ತೊಮ್ಮೆ ಅದ್ಭುತ ಪ್ರದರ್ಶನವನ್ನು ನೀಡಿದಿರಿ ಎಂದು ರಾಹುಲ್ ದ್ರಾವಿಡ್, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಗುಣಗಾನ ಮಾಡಿದ್ದಾರೆ.

Back to top button