ವಿಜಯಪುರ : ‘ದೆಹಲಿಯಿಂದ ಹೈಕಮಾಂಡ್ ನವರು ಬುಧವಾರ ನನಗೆ ಕರೆ ಮಾಡಿ, ತಕ್ಷಣ ಹೊರಟು ಬನ್ನಿ ಎಂದಿದ್ದರು. ಆದರೆ, ನಾನು ಒಬ್ಬನೇ ಬರೋದಿಲ್ಲ, ನನ್ನ ಟೀಮ್ ಸಹಿತ ಬರುವೆ ಎಂದು ಉತ್ತರಿಸಿದ್ದೇನೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಒಬ್ಬನೇ ಬರಲು ಸಾಧ್ಯವಿಲ್ಲ. ಬರುವುದಿದ್ದರೆ ಟೀಮ್ ಸಹಿತ ಬರುತ್ತೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ವಕ್ಸ್‌ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಎಲ್ಲರ ನ್ಯೂ ದೆಹಲಿಗೆ ಕರೆಯಿರಿ, ಆಗ ಬಂದು ಕರ್ನಾಟಕದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ. ಒಬ್ಬರನ್ನು ಕರೆದು ಸಮಾಧಾನ ಮಾ ಡಲು ಆಗುವುದಿಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ, ಕ್ಷಮಾಪಣೆ ಕೇಳುವುದಿಲ್ಲ. ನಾನಾಡಿದ ಒಂದು ಶಬ್ದವನ್ನೂ ವಾಪಸ್ ತೆಗೆದು ಕೊಳ್ಳುವುದಿಲ್ಲ ಎಂದು ತಿಳಿಸಿದ್ದೇನೆ’ ಎಂದು ಹೇಳಿದರು.
ಕಾಂಗ್ರೆಸ್ ಜೊತೆಗೆ ಯತ್ನಾಳ ಕೈ ಜೋಡಿಸಿದ್ದಾರೆ ಎಂದಿದ್ದ ಬಿ.ಸಿ.ಪಾಟೀಲ್ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ, ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಕೀಳು ಕೆಲಸವನ್ನು ನಾವು ಮಾಡಲ್ಲ, ರಾಜ್ಯಾಧ್ಯಕ್ಷರು ಹೋಗಿ ಡಿಕೆಶಿ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಆ ವಿಡಿಯೋಗಳು ನನ್ನ ಬಳಿ ಇವೆ. ನಾವು ಕಾಂಗ್ರೆಸ್ ಜೊತೆಗೆ ಕೈ ಜೋಡಿಸುವ ಕೆಲಸ ಮಾಡಲ್ಲ. ಪಕ್ಷಕ್ಕೆ ದ್ರೋಹ ಮಾಡಲ್ಲ. ಹೆತ್ತತಾಯಿಗೆ ದ್ರೋಹ ಬಗೆಯಲ್ಲ ಎಂದರು.
ಕೋರ್ ಕಮಿಟಿಯಲ್ಲಿ ತಮ್ಮ ವಿರುದ್ಧ ದೂರು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ದೂರು ಕೊಡಲಿ ಬಿಡಿ. ದೂರು ಕೊಡಲು ನಾನೇ ಹೇಳಿದ್ದೇನೆ. ನಾನು ಯಾರಿಗೂ, ಯಾರ ದೂರಿಗೂ ಹೆದರುವುದಿಲ್ಲ. ಯತ್ನಾಳರನ್ನು ಮುಟ್ಟೋದು ಅಷ್ಟು ಸಲೀಸಲ್ಲ. ನನ್ನ ಜೊತೆಗೆ ರಾಜ್ಯದ ಜನರಿದ್ದಾರೆ. ನನ್ನ ಜೊತೆಗೆ ದೆಹಲಿ ನಾಯಕರಿದ್ದಾರೆ ಎಂದು ಹೇಳಿದರು.