ಭಾರತೀಯ ಕ್ರಿಕೆಟ್ ಪ್ರೇಮಿಗಳ ಕನಸು ನನಸು?.. ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್?
ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಕ್ರಿಕೆಟ್ ದಂತಕಥೆ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಕೋಚ್ ಆಗಬೇಕು ಎನ್ನುವ ಮಹದಾಸೆಗೆ ಮತ್ತೆ ಜೀವಬಂದಿದ್ದು, ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಸಾಧ್ಯತೆಗಳಿವೆ ಎನ್ನಲಾಗಿದೆ.
ಹೌದು.. ಯುಎಇನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಮುಖ್ಯ ತರಬೇತುದಾರನ ಸ್ಥಾನವನ್ನು ರವಿಶಾಸ್ತ್ರಿ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕುರಿತಂತೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ವರದಿಯಲ್ಲಿರುವಂತೆ ಖಚಿತ ಮಾಹಿತಿಗಳ ಪ್ರಕಾರ ಮುಂಬರುವ ಟಿ20 ವಿಶ್ವಕಪ್ ಬಳಿಕ ಕೋಚಿಂಗ್ ಪ್ಯಾನೆಲ್ ನಲ್ಲಿ ಮುಂದುವರಿಯಲು ರವಿಶಾಸ್ತ್ರಿ ಹಾಗೂ ಇತರೆ ಸಹಾಯಕ ತರಬೇತುದಾರರು ಆಸಕ್ತಿ ತೋರಿಲ್ಲ . ಹೀಗಾಗಿ ನೂತನ ಕೋಚ್ ಗೆ ಬಿಸಿಸಿಐ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದ್ದು, ಹಾಲಿ ಎನ್ ಸಿಎ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಕೋಚ್ ಜವಾಬ್ದಾರಿ ಹುದ್ದೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಾಸ್ತ್ರಿ ನಿರಾಸಕ್ತಿ?
ಇನ್ನು ಇದೇ ವರದಿಯಲ್ಲಿರುವಂತೆ ಹಾಲಿ ಟೀಂ ಇಂಡಿಯಾ ಪ್ರಧಾನ ಕೋಚ್ ಆಗಿರುವ ರವಿಶಾಸ್ತ್ರಿ ಅವರು ಕೋಚ್ ಸ್ಥಾನದಲ್ಲಿ ಮುಂದುವರೆಯಲು ಆಸಕ್ತಿ ತೋರಿಲ್ಲ ಎನ್ನಲಾಗಿದೆ. ಅಲ್ಲದೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ಲಾರ್ಡ್ಸ್ ಟೆಸ್ಟ್ ಸಮಯದಲ್ಲಿ ಮಂಡಳಿ ಅಧಿಕಾರಿಗಳು, ರವಿಶಾಸ್ತ್ರಿ ಹಾಗೂ ಕೋಚಿಂಗ್ ಪ್ಯಾನೆಲ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ತರಬೇತುದಾರರು ಕೋಚಿಂಗ್ ಪ್ಯಾನೆಲ್‌ನಲ್ಲಿ ಮುಂದುವರಿಯಲು ಆಸಕ್ತಿ ತೋರದಿದ್ದರೆ ಆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದೆ.
ಇದೇ ವಿಚಾರವಾಗಿ ಚರ್ಚಿಸಲು ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಮತ್ತು ಉಪಾಧ್ಯಕ್ಷರು ಇಂದು ಲಂಡನ್‌ಗೆ ಬಂದಿಳಿಯುತ್ತಾರೆ. ಅವರು ಶಾಸ್ತ್ರಿ ತಂಡದೊಂದಿಗೆ ಸಂವಾದ ನಡೆಸಲಿದ್ದು, ಟೀಮ್ ಇಂಡಿಯಾ ಭವಿಷ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಕೋಚ್ ಸ್ಥಾನದಲ್ಲಿ ಮುಂದುವರಿಯಲು ರವಿಶಾಸ್ತ್ರಿ ಆಸಕ್ತಿ ತೋರದಿದ್ದರೆ ಆ ಬಗ್ಗೆಯೂ ಚರ್ಚೆ ನಡೆಯಲಿದೆ. ಆದರೆ ಶಾಸ್ತ್ರಿ ಮುಂದುವರಿಕೆ ಬಗ್ಗೆ ಈಗಲೇ ಖಚಿತವಾಗಿ ನಿರ್ಧರಿಸಲಾಗದು ಎನ್ನಲಾಗಿದೆ.
ದ್ರಾವಿಡ್ ಗೆ ಹೆಚ್ಚುವರಿ ಜವಾಬ್ಜಾರಿ ಸಾಧ್ಯತೆ
ಇನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮಂಗಳವಾರದಂದು ಅರ್ಜಿ ಆಹ್ವಾನಿಸಿದೆ. ಇದೂ ಕೂಡ ಅಚ್ಚರಿಗೆ ಕಾರಣವಾಗಿದ್ದು. ದ್ರಾವಿಡ್ ಎನ್ ಸಿಎಯ ಹಾಲಿ ಮುಖ್ಯಸ್ಥರಾಗಿದ್ದಾರೆ. ಆದರೆ ಆ ಸ್ಥಾನಕ್ಕೆ ಬೇರೊಬ್ಬರನ್ನು ತಂದು ದ್ರಾವಿಡ್ ಗೆ ಪ್ರಧಾನ ಕೋಚ್ ಹುದ್ದೆಯ ನೀಡುವ ಸಲುವಾಗಿಯೇ ಅರ್ಜಿ ಆಹ್ವಾನಿಸಲಾಗಿದೆಯೇ ಎಂಬ ಅನುಮಾನ ಕೂಡ ಹಲವರನ್ನು ಕಾಡುತ್ತಿದೆ.
ಅದೇ ವೇಳೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್‌ಗೆ ಮತ್ತಷ್ಟು ದೊಡ್ಡ ಹುದ್ದೆಯನ್ನು ನೀಡುವ ಇರಾದೆಯನ್ನು ಮಂಡಳಿ ಹೊಂದಿದೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ರವಿಶಾಸ್ತ್ರಿ ನಿರ್ಗಮಿಸಲು ಬಯಸಿದರೆ ನೂತನ ಕೋಚ್ ಆಯ್ಕೆಯಲ್ಲಿ ರಾಹುಲ್ ದ್ರಾವಿಡ್ ಮುಂಚೂಣಿಯಲ್ಲಿರಲಿದ್ದಾರೆ. ಆದರೆ ಇತ್ತೀಚಿನ ಶ್ರೀಲಂಕಾ ಪ್ರವಾಸದ ವೇಳೆ ಪೂರ್ಣಾವಧಿಗೆ ಕೋಚ್ ಆಗುವ ಬಗ್ಗೆ ಯೋಚಿಸಿಲ್ಲ. ಹಾಲಿ ನನ್ನ ಕೆಲಸದಲ್ಲಿ ನಾನು ಸಂತೋಷವಾಗಿದ್ದೇನೆ. ಬೇರೆಯದರ ಬಗ್ಗೆ ನಾನು ಯೋಚಿಸಿಲ್ಲ ಎಂದು ದ್ರಾವಿಡ್ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಮುಂಬರುವ ಬೆಳವಣಿಗೆಗಳು ಹೆಚ್ಚಿನ ಕುತೂಹಲ ಕೆರಳಿಸಿವೆ.
ಎನ್ ಸಿಎ
ಎನ್‌ಸಿಎ ಕ್ರಿಕೆಟ್ ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ತನ್ನ ಆಹ್ವಾನದಲ್ಲಿ ಆ ವ್ಯಕ್ತಿಯು ಬಿಸಿಸಿಐ ಕಾರ್ಯದರ್ಶಿಗೆ ವರದಿ ಸಲ್ಲಿಸುವುದಾಗಿ ಮತ್ತು ಎರಡು ವರ್ಷಗಳ ಒಪ್ಪಂದವನ್ನು ಪಡೆಯುವುದಾಗಿ ಹೇಳಿದೆ. ಎನ್ ಸಿಎ ಮುಖ್ಯಸ್ಥರು 25-30 ಜನರನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಈ ಪೈಕಿ 12 ಮಂದಿ ನೇರವಾಗಿ ಅವರಿಗೆ ವರದಿ ಮಾಡುತ್ತಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ, ಬೆಂಗಳೂರು (NCA) ಯಲ್ಲಿ ಎಲ್ಲಾ ಕ್ರಿಕೆಟ್ ಕೋಚಿಂಗ್ ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿಯನ್ನು NCA ನಿರ್ವಹಿಸುತ್ತದೆ. ಅಕಾಡೆಮಿಯಲ್ಲಿ ತರಬೇತಿಗೆ ಹಾಜರಾಗುವ ಎಲ್ಲ ಕ್ರಿಕೆಟಿಗರ ತಯಾರಿ, ಅಭಿವೃದ್ಧಿ ಮತ್ತು ಕಾರ್ಯಕ್ಷಮತೆಯ ಜವಾಬ್ದಾರಿಯನ್ನು ಎನ್ ಸಿಎ ನಿರ್ವಹಿಸುತ್ತದೆ. ಎನ್‌ಸಿಎಗೆ ಕಳುಹಿಸಿದ ಪುರುಷ ಮತ್ತು ಮಹಿಳಾ ಆಟಗಾರರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಉದಯೋನ್ಮುಖ ಮತ್ತು ಯುವ ಕ್ರಿಕೆಟಿಗರ ಅಭಿವೃದ್ಧಿ ಆ ಸಂಸ್ಥೆಯ ಏಕೈಕ ಜವಾಬ್ದಾರಿಯಾಗಿರುತ್ತದೆ.
“ಭಾರತ ಎ ತಂಡಗಳು 23 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 19 ವರ್ಷದೊಳಗಿನವರು, 16 ವರ್ಷದೊಳಗಿನ ತಂಡದ ಆಟಗಾರರು, ಮತ್ತು ಎನ್‌ಸಿಎಯಲ್ಲಿ ತರಬೇತಿ ನೀಡುವ ಮತ್ತು ಎನ್‌ಸಿಎಯಲ್ಲಿ ಕೌಶಲ್ಯಗಳನ್ನು ಸುಧಾರಿಸುವ ರಾಜ್ಯ ಸಂಘದ ಆಟಗಾರರನ್ನು ಒಳಗೊಳ್ಳಬಹುದು, ಆದರೆ ಮುಖ್ಯ ಕ್ರಿಕೆಟ್ ಎನ್‌ಸಿಎ ಇದರೊಂದಿಗೆ ಕೆಲಸ ಮಾಡುತ್ತದೆ. ರಾಷ್ಟ್ರೀಯ ಪುರುಷ ಮತ್ತು ಮಹಿಳಾ ಮುಖ್ಯ ತರಬೇತುದಾರರು, ಮತ್ತು ಭಾರತ ತರಬೇತಿಯ ತಂಡಗಳಿಗೆ ಕ್ರಿಕೆಟ್ ತರಬೇತುದಾರರು – ಭಾರತ ಎ, ಅಂಡರ್ 19, ಅಂಡರ್ 23, ಭಾರತ ಮಹಿಳಾ ತಂಡಗಳು ಪ್ರಮುಖ ತರಬೇತಿ ಮತ್ತು ಅಭಿವೃದ್ಧಿ ಉದ್ದೇಶಗಳನ್ನು ಗುರುತಿಸುವಲ್ಲಿ ಎನ್ ಸಿಎ ಪ್ರಮುಖ ಪಾತ್ರ ನಿರ್ವಹಿಸುತ್ತದೆ.