ಕರಾವಳಿ

ಶಂಕರ್ ದೇವಾಡಿಗ ಅವರು ಶಿಕ್ಷಣ‌ಇಲಾಖೆಯಲ್ಲಿ ಸುದೀರ್ಘ36 ವರ್ಷಗಳ ಕರ್ತವ್ಯ ಸಲ್ಲಿಸಿ ಜು. 31 ರಂದು ವಯೋನಿವೃತ್ತರಾಗಿದ್ದಾರೆ.

ಬೆಳ್ತಂಗಡಿ: ಉಜಿರೆ ಸರಕಾರಿ ಹಿ. ಪ್ರಾ ಶಾಲೆ ಹಳೆಪೇಟೆ ಇಲ್ಲಿ ಕಳೆದ 2010 ರಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯದಲ್ಲಿದ್ದ ಶಂಕರ್ ದೇವಾಡಿಗ ಅವರು ಶಿಕ್ಷಣ‌ಇಲಾಖೆಯಲ್ಲಿ ಸುದೀರ್ಘ36 ವರ್ಷಗಳ ಕರ್ತವ್ಯ ಸಲ್ಲಿಸಿ ಜು. 31 ರಂದು ವಯೋನಿವೃತ್ತರಾಗಿದ್ದಾರೆ.

ತಾಲೂಕಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆ  ಬೆಳ್ತಂಗಡಿಯಲ್ಲಿ ಸರಕಾರಿ ಕೆಲಸಕ್ಕೆ ಸೇರಿದ್ದ ಅವರು ಇಲ್ಲಿ 18 ವರ್ಷಗಳ ಸೇವೆ ಸಲ್ಲಿಸಿ, ಬಳಿಕ ಗೇರುಕಟ್ಟೆ ಪ್ರೌಢ ಶಾಲೆಯಲ್ಲಿ, ಬಂದಾರು ಮತ್ತು ತಣ್ಣೀರುಪಂತ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಹಳೆಪೇಟೆ ಹಿ. ಪ್ರಾ ಶಾಲೆಯಲ್ಲಿ ಕರ್ತವ್ಯದಲ್ಲಿದ್ದರು.

ಈ ಮಧ್ಯೆ ಅವರು ಒಂದು ಬಾರಿ ಅಕ್ಷರ ದಾಸೋಹ ವಿಭಾಗದ ಕಚೇರಿ ಸಹಾಯಕರಾಗಿಯೂ ಕೆಲಸ ನಿರ್ವಹಿಸಿದ್ದರು.

ಧರ್ಮಸ್ಥಳದ ದಿ. ಸಂಜೀವ ದೇವಾಡಿಗ ಮತ್ತು ದಿ. ಚಂದ್ರಾವತಿ ದಂಪತಿ ಪುತ್ರರಾಗಿರುವ ಶಂಕರ್ ದೇವಾಡಿಗ ಅವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದಲ್ಲಿ ಕಲಿತು, ಬೆಂಗಳೂರಿನಲ್ಲಿ ವೈ.ಎಮ್.ಸಿ.ಎ ಕಾಲೇಜಿನಲ್ಲಿ ತರಬೇತಿ ಪಡೆದು ಸರಕಾರಿ ಕೆಲಸದ ಅವಕಾಶ ಪಡೆದುಕೊಂಡಿದ್ದರು.

ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಶಂಕರ ದೇವಾಡಿಗ ಅವರು 2013-14 ರಲ್ಲಿ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ 100 ಮೀ., 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ. 1985 ರಿಂದ 2021 ರ ವರೆಗೂ ಸತತವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೆ ಶಿಕ್ಷಕರಿಗಾಗಿ ನಡೆದ ಕ್ರೀಡಾಕೂಟದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅತೀ ಹೆಚ್ಚು ವೈಯುಕ್ತಿಕ ಪ್ರಶಸ್ತಿ ಪಡೆದ ಖ್ಯಾತಿ ಹೊಂದಿದ್ದಾರೆ. ತಾಲೂಕಿನಿಂದ ಹಲವಾರು ವಿದ್ಯಾರ್ಥಿಗಳನ್ನು ಕ್ರೀಡೆಗಾಗಿ ತರಬೇತು ಗೊಳಿಸಿದ ಇವರು ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆಲ್ಲುವಂತೆ ಮಾಡಿದ್ದಾರೆ. ಕ್ರೀಡಾ ಕೌಶಲ್ಯವಿರುವ ಓರ್ವ ವಿದ್ಯಾರ್ಥಿಯನ್ನು ಪ್ರತೀ ವರ್ಷ ಆಯ್ಕೆಗೊಳಿಸಿ  ಅವರಿಗೆ ವಿಶೇಷ ತರಬೇತಿ ನೀಡುವ ಮಾದರಿ ಹವ್ಯಾಸ ಬೆಳೆಸಿಕೊಂಡಿದ್ದರು. ಪ್ರಸ್ತುತ ಕಾಶಿಬೆಟ್ಟು ಎಂಬಲ್ಲಿ ನೆಲೆಸಿರುವ ಅವರ ಪತ್ನಿ ತಾರಾಕೇಸರಿ ಅವರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿಯಾಗಿ ಕರ್ತವ್ಯದಲ್ಲಿದ್ದರೆ, ಪುತ್ರಿ ರಶ್ಮಿರಾಣಿ ಡಿ.ಎಸ್ ಅವರು ನ್ಯೂಕ್ಲಿಯಾರ್ ಮೆಡಿಸಿನ್ ರೇಡಿಯೇಶನ್ ಸೇಫ್ಟಿ ಆಫೀಸರ್ ಹುದ್ದೆಯಲ್ಲಿ ಮುಂಬಯಿಯಲ್ಲಿದ್ದಾರೆ. ಪುತ್ರ ರಜತ್‌ರಾಜ್ ಕಂಪ್ಯೂಟರ್ ಇಂಜಿನಿಯರ್ ಆಗಿ ಬೆಂಗಳೂರಿನ‌ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.

Related Articles

Back to top button