ಮಂಗಳೂರು: ಆಡಳಿತ ಮತ್ತು ವಿಪಕ್ಷ ನಾಯಕರ ಮಧ್ಯೆ ವಾಗ್ದಾಳಿ ನಿಲ್ಲುತ್ತಲೇ ಇಲ್ಲ, ಮಂಗಳೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರೇ ತಾಲಿಬಾನ್ ಸಂಸ್ಕೃತಿ ಹೊಂದಿದವರು, ಅವರು ದೊಡ್ಡ ಭಯೋತ್ಪಾದಕ ಅನಿಸುತ್ತಿದೆ ಎಂದು ಕಟುಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗಲೇ 24ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿತ್ತು, ಅವರ ಆಳ್ವಿಕೆ ಕಾಲದಲ್ಲಿಯೇ, ಕಾಂಗ್ರೆಸ್ ಆಡಳಿತದಲ್ಲಿಯೇ ರಾಜ್ಯದಲ್ಲಿ ಹೆಚ್ಚು ಕೊಲೆ, ಸುಲಿಗೆ, ಮರಣ, ನಿತ್ಯ ಗೋಹತ್ಯೆ ನಡೆಯುತ್ತಿತ್ತು ಎಂದು ಟೀಕಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ನಳಿನ್ ಕುಮಾರ್ ಕಟೀಲು, ಸಿದ್ದರಾಮಯ್ಯನವರದ್ದು ತಾಲಿಬಾನ್ ಸಂಸ್ಕೃತಿ ಎಂದು ಹೇಳಿ, ಬಿಜೆಪಿಯವರದ್ದು ತಾಲಿಬಾನ್ ಸಂಸ್ಕೃತಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಇವತ್ತು ಅತಂತ್ರ ಸ್ಥಿತಿಯಲ್ಲಿದೆ. ಅವರಿಗೆ ಅತಂತ್ರ ಸ್ಥಿತಿ ಬಂದಾಗ ಬಿಜೆಪಿ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ದಕ್ಷಿಣ ಕನ್ನಡ ಒಂದೇ ಜಿಲ್ಲೆಯನ್ನು ತೆಗೆದುಕೊಂಡು ನೋಡಿದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಶರತ್ ಮಡಿವಾಳ, ದೀಪಕ್ ರಾವ್ , ಪ್ರತಾಪ್ ಪೂಜಾರಿ ಹೀಗೆ ಹಲವು ಹಿಂದೂ ಮುಖಂಡರು, ಕಾರ್ಯಕರ್ತರ ಹತ್ಯೆಯಾಗಿದೆ. ಸುಳ್ಯದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲ್ಲಲಾಗಿತ್ತು, ಎಟಿಎಂ ಒಳಗೆ ಹೋದ ಮಹಿಳೆ ಮೇಲೆ ಬರ್ಭರವಾಗಿ ಹಲ್ಲೆಯಾಗಿತ್ತು, ಇದಕ್ಕೆ ನಾನು ಹೇಳಿದ್ದು ಅವರದ್ದೇ ತಾಲಿಬಾನ್ ಸಂಸ್ಕೃತಿ ಎಂದು ಟೀಕಿಸಿದರು.