
ಮಂಗಳೂರು : ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕ್ ಆಗಿ ಸೇವೆ ಗೈಯ್ಯುತ್ತಿದ್ದ ನಿಟ್ಟೆಯ ಪರ್ಪಾಡಿ ನಿವಾಸಿ ಅಭಿಷೇಕ್ ಎಂಬ 26 ವರ್ಷದ ಯುವಕ ತನ್ನ ಮನೆಯಲ್ಲಿ ಆತ್ಮಹತ್ಯೆ ಗೈದಿದ್ದು ನನ್ನ ಆತ್ಮಹತ್ಯೆಗೆ, ರಾಹುಲ್, ನಿರೀಕ್ಷಾ, ರಾಕೇಶ್ ಮತ್ತು ತಸ್ಲೀಮ್ ಎಂಬ ನಾಲ್ವರು ತನ್ನ ಖಾಸಗಿ ವಿಡಿಯೋ ಬಳಸಿ ಬ್ಲ್ಯಾಕ್ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದುದೇ ಕಾರಣ ಎಂಬುದಾಗಿ ಡೆತ್ ನೋಟ್ ಬರೆದಿದ್ದಾಗಿ ಪ್ರಕರಣ ದಾಖಲಾಗಿದೆ ಎಂಬುದಾಗಿ ಪೊಲೀಸ್ ಹೇಳಿಕೆ ನೀಡಿದ್ದಾರೆ.
ಈ ನಾಲ್ವರು ವ್ಯಕ್ತಿಗಳು ಹಣಕ್ಕಾಗಿ ತೀವ್ರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅಭಿಷೇಕ್ ತನ್ನ ಡೆತ್ ನೋಟಿನಲ್ಲಿ ಆರೋಪಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಅಭಿಷೇಕ್ ನಿರಂತರ ಬೆದರಿಕೆ ಮತ್ತು ಸುಲಿಗೆ ಪ್ರಯತ್ನಗಳಿಂದ ನೊಂದಿದ್ದರು ಎಂಬುದಾಗಿ ವರದಿಗಳೂ ಇದೆ. ಈ ಬಗ್ಗೆ ಮಾನ್ಯ ದ.ಕ ಜಿಲ್ಲಾಧಿಕಾರಿಗಳು ಮತ್ತು ಪೊಲೀಸು ವರಿಷ್ಟಾಧಿಕಾರಿಗಳು ವಿಶೇಷ ಮುತವರ್ಜಿ ವಹಿಸಿ ಸಮಗ್ರ ತನಿಖೆ ನಡೆಸಬೇಕು. ಇದರ ಹಿಂದೆ ಬಹುದೊಡ್ಡ ಜಾಲವೊಂದು ಕಾರ್ಯಪ್ರವರ್ತಿಸುವ ಸಂಶಯವಿದ್ದು ಇನ್ನಷ್ಟು ಬಡಪಾಯಿಗಳು ಇವರ ಜಾಲದಲ್ಲಿ ಸಿಕ್ಕಿ ಸುಲಿಗೆಯ ಕಷ್ಟ ಅನುಭವಿಸುವ ಸಾದ್ಯತೆಯಿದೆ.
ಈ ಜಾಲವನ್ನು ಸಮಾಜದ ಮುಂದೆ ಬೆತ್ತಲೆಗೊಳಿಸಬೇಕು. ಅಭಿಷೇಕ್ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ಎಂ. ಎಸ್. ಎಫ್ ಜಿಲ್ಲಾಧ್ಯಕ್ಷರಾದ ಝುಲ್ಛಿಕರ್ ಅಲೀ ಎಚ್. ಕಲ್ಲು ಆಗ್ರಹಿಸಿದ್ದಾರೆ.