ಮಂಗಳೂರು: ಖ್ಯಾತ ಹಿರಿಯ ಸಾಹಿತಿ ಸಾರಾ ಅಬೂಬಕರ್ (87) ನಿಧನರಾಗಿದ್ದಾರೆ. ಕೆಲವು ಸಮಯಗಳಿಂದ ವಯೋಸಜಹ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಲೇಡಿ ಹಿಲ್ ಬಳಿಯಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾರಾ ಅಬೂಬಕರ್ ಕನ್ನಡದ ಪ್ರಮುಖ ಕಥೆ, ಕಾದಂಬರಿಗಾರ್ತಿಯಾಗಿ ಪ್ರಸಿದ್ಧರಾಗಿದ್ದರು.
ಸಾರಾ ಅಬೂಬಕ್ಕರ್ ಅವರು ಜೂನ್ 30, 1936ರಂದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮವೊಂದರಲ್ಲಿ ಜನಿಸಿದರು. ಅವರು ಹುಟ್ಟೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು, ಕಾಸರಗೋಡಿನಲ್ಲಿ ಪ್ರೌಢಶಿಕ್ಷಣ ಮುಗಿಸಿದ್ದರು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ 40 ವರ್ಷ ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು.ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ದ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯು ಮೆಚ್ಚುಗೆ ಪಡೆಯಿತು.
10 ಕ್ಕೂ ಹೆಚ್ಚು ಕಾದಂಬರಿ, 6 ಕಥಾ ಸಂಕಲನ, 5 ಬಾನುಲಿ ನಾಟಕ, 4 ಲೇಖನ, ಒಂದು ಪ್ರವಾಸ ಕಥನವನ್ನು ಸಾರಾ ಅಬೂಬಕರ್ ಬರೆದಿದ್ದರು.
ಮಂಗಳೂರಿನ ಲೇಡಿಹಿಲ್’ನ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ರಾತ್ರಿ 8 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.